ಕಲಬುರಗಿ: ಆಳಂದ ತಾಲೂಕಿನ ಮುನ್ನಹಳ್ಳಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 29 ಜನ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಆತಂಕದಲ್ಲಿದ್ದು, ಸ್ವಯಂ ಘೋಷಿತ ಸಂಪೂರ್ಣ ಲಾಕ್‌ಡೌನ್ ನಿರ್ಮಾಣವಾಗಿದೆ.
ಹಲವರು ಕೊರೊನಾ ಸೋಂಕಿನಿಂದ ಬಳಲಿ ಮೃತಪಟ್ಟರೆ ಇನ್ನೂ ಕೆಲವರು ಏಕಾಏಕಿ ಜ್ವರ ಉಲ್ಬಣಗೊಂಡು ವಿಚಿತ್ರ ರೋಗಕ್ಕೆ ಬಲಿಯಾಗಿದ್ದಾರೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಊರಿನ ಬಹುತೇಕರಲ್ಲಿ ಶೀತ, ಜ್ವರ, ದಮ್ಮು, ಕೆಮ್ಮು ಕಾಣಿಸಿಕೊಳ್ಳುತ್ತಿದೆ.
ವೃದ್ಧರು ಮಾತ್ರವಲ್ಲ, ಯುವಕರು ಕೂಡಾ ಮೃತಪಡುತ್ತಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಸರಣಿ ಸಾವು ಸಂಭವಿಸುತ್ತಿದ್ದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಜನರು ಕಿಡಿಕಾರುತ್ತಿದ್ದಾರೆ.
ಅನೇಕರು ಮನೆಗಳನ್ನು ಬಿಟ್ಟು ಹೊಲದಲ್ಲಿ ವಾಸ ಮಾಡುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಬೇಕು. ಅಗತ್ಯ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.