ಹಾವೇರಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಮಗನ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಬಳಿ ನಡೆದಿದೆ. ಕಾರ್ಖಾನೆಯ ಬೆಲ್ಟ್ಗೆ ಸಿಲುಕಿ 19 ವರ್ಷದ ಯುವ ಕಾರ್ಮಿಕ ನವೀನ್ ಚೆಲುವಾದಿ ಸಾವನ್ನಪ್ಪಿದ್ದಾನೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಈ ಕುರಿತಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬಿನ ಪುಡಿ ತುಂಬುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಐಪಿಎನ್ ಡಿಸ್ಟಲರಿಸ್ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಈ ಕಾರ್ಖಾನೆಯು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಒಡೆತನಕ್ಕೆ ಸೇರಿದೆ. ಶಿಗ್ಗಾಂವಿ ತಾಲೂಕಿನ ದುಂಡಸಿಯ ಕಾರ್ಮಿಕ ನವೀನ ಬಸಪ್ಪ ಚಲವಾದಿ (19) ಸಾವನ್ನಪ್ಪಿದ್ದಾನೆ. ಕಾರ್ಖಾನೆ ಮ್ಯಾನೇಜರ್ ಸೇರಿ ಆರು ಜನರ ವಿರುದ್ಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಶನಿವಾರ ಸಂಜೆ ಪ್ರಕರಣ ನಡೆದಿದ್ದು, ಭಾನುವಾರ ಕೇಸ್ ದಾಖಲು ಮಾಡಲಾಗಿದೆ.
ಭೀಕರ ರಸ್ತೆ ಅಪಘಾತಕ್ಕೆ ಕುಟುಂಬದ ನಾಲ್ವರು ಮೃತ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಲೋಕೇಶ್ ಆಚಾರಿ, ಪತ್ನಿ ಲಕ್ಷ್ಮಿ, ಮಕ್ಕಳಾದ ಲೇಖನ ಮತ್ತು ಗಾನವಿ ಎಂದು ಗುರುತಿಸಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದ ಸವಾರ, ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದಾರೆ ಎಂಬುದು ತಿಳಿದುಬಂದಿದೆ.
ಚನ್ನರಾಯಪಟ್ಟಣ ತಾಲೂಕಿನ ನವಿಲೆ ಗೇಟ್ ಗ್ರಾಮದ ಲೋಕೇಶ್ ಆಚಾರಿ 12 ವರ್ಷದ ಹಿಂದೆ ಲಕ್ಷ್ಮಿ ಎಂಬುವರನ್ನು ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ತನ್ನ ತಂಗಿಯ ಇಬ್ಬರು ಹೆಣ್ಣು ಮಕ್ಕಳಾದ ಗಾನವಿ ಮತ್ತು ಲೇಖನಳನ್ನು ಕರೆದುಕೊಂಡು ಬಂದು ತಾವೇ ಸಾಕುತ್ತಿದ್ದರು. ಅಕ್ಕಪಕ್ಕದ ದೇವಸ್ಥಾನಗಳನ್ನು ಸುತ್ತಿ ನೂರಾರು ಹರಕೆ ಕಟ್ಟಿಕೊಂಡ ಬಳಿಕ ಕಳೆದ ಮೂರು ತಿಂಗಳ ಹಿಂದಷ್ಟೇ ಪತ್ನಿ ಲಕ್ಷ್ಮಿ ಗರ್ಭ ಧರಿಸಿದ್ದರು. ಹಾಗಾಗಿ, ಮನೆಯಲ್ಲಿ ಸಂಭ್ರಮ ನೆಲೆಸಿತ್ತು.
ಅಪಘಾತಕ್ಕೂ ಮುನ್ನ ದೊಡ್ಡಮ್ಮನನ್ನು ನೋಡಬೇಕು ಅಂತ ಮಕ್ಕಳು ಕೇಳಿದ್ದಕ್ಕೆ ಇಡೀ ಕುಟುಂಬ ಸಮೇತ ಬಿ ಹೊಸೂರು ಗ್ರಾಮಕ್ಕೆ ಹೋಗಿ, ರಾತ್ರಿ ಊಟ ಮುಗಿಸಿ ಬೈಕ್ನಲ್ಲಿ ವಾಪಸ್ ಊರಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ರೂಪದ ಯಮಸ್ವರೂಪಿಗೆ ದಂಪತಿ ಸೇರಿದಂತೆ ತನ್ನ ತಂಗಿಯ ಮಕ್ಕಳು ಬಲಿಯಾಗಿದ್ದು, ಗರ್ಭದಲ್ಲಿದ್ದ ಕೂಸು ಕೂಡ ಪ್ರಾಣ ಕಳೆದುಕೊಂಡಿದೆ.
ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ನುಗ್ಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ರವಾನೆ ಮಾಡಿದ್ದಾರೆ. ಯಾವುದೇ ಸೂಚನಾ ಫಲಕ ಹಾಕದೇ ರಸ್ತೆ ಬದಿಯಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ವಿರುದ್ಧ ಮೃತರ ಸಂಬಂಧಿಕರು ನುಗ್ಗೆಹಳ್ಳಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ಇದನ್ನೂ ಓದಿ : ಗದಗದಲ್ಲಿ ಭೀಕರ ರಸ್ತೆ ಅಪಘಾತ.. ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಸಾವು