ಹಾವೇರಿ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ದೊಡ್ಡ ಗಲಾಟೆಯೇ ನಡೆದಿದೆ. ಈ ಮಾರಾಮಾರಿ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೀರೇಶ ಕುಪಗಡ್ಡಿ ಮತ್ತು ಶಿವಾನಂದ ಕೋಡಿಹಳ್ಳಿ ಎಂಬುವರ ಕುಟುಂಬದ ನಡುವೆ ಅವಾಚ್ಯಶಬ್ದಗಳ ನಿಂದನೆ ಜೊತೆಗೆ ಗಲಾಟೆಯಾಗಿದೆ. ಕಲ್ಲು ಮತ್ತ ಮಣ್ಣಿನ ಹೆಂಟಿಗಳಿಂದ ಎರಡು ಕುಟುಂಬಗಳ ಸದಸ್ಯರು ಹೊಡೆದಾಡಿಕೊಂಡಿದ್ದಾರೆ. ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಮೀನಿಗೆ ಬಂದಿದ್ದ ವೇಳೆ ಉಭಯ ಕುಟುಂಬದ ಸದಸ್ಯರು ಪರಸ್ಪರ ಬಡಿದಾಡಿಕೊಂಡಿಕೊಂಡಿದ್ದಾರೆ.
ಮಹಿಳೆಯರು ವೃದ್ಧರು ಎಂಬುದನ್ನೂ ಲೆಕ್ಕಿಸದೆ ಕಲ್ಲು, ಮಣ್ಣಿನ ಹೆಂಟೆಗಳಿಂದ ಎರಡು ಕುಟುಂಬಗಳು ಹೊಡೆದಾಡಿಕೊಂಡಿವೆ. ಕಲ್ಲು, ಮಣ್ಣಿನ ಹೆಂಟೆಗಳ ಏಟಿಗೆ ಅಸ್ವಸ್ಥಗೊಂಡು ಮಹಿಳೆಯರು ಕೆಳಕ್ಕೆ ಬಿದ್ದರೂ ಸಹ ಈ ಹೊಡೆದಾಟ ನಿಂತಿಲ್ಲ. ಶುಕ್ರವಾರ ಮಧ್ಯಾಹ್ನ ನಡೆದಿದ್ದ ಈ ಗಲಾಟೆಯ ವಿಡಿಯೋ ಇಂದು ವೈರಲ್ ಆಗಿದೆ.
ಹೊಡೆದಾಟದ ವೇಳೆ ಅಸ್ವಸ್ಥಗೊಂಡವರಿಗೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಕೋಡಿಹಳ್ಳಿ ಕುಟುಂಬದ ಹತ್ತು ಜನರ ವಿರುದ್ಧ ಕುಪಗಡ್ಡಿ ಕುಟುಂಬದ ಸದಸ್ಯರು ಜೀವ ಬೆದರಿಕೆಯ ದೂರು ದಾಖಲಿಸಿದ್ದಾರೆ. ಪ್ರತಿಯಾಗಿ ಕುಪಗಡ್ಡಿ ಕುಟುಂಬದ 12 ಮಂದಿ ವಿರುದ್ಧ ಶಿವಾನಂದ ಕೋಡಿಹಳ್ಳಿ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಲಾಗಿದೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ