ರಾಣೇಬೆನ್ನೂರು(ಹಾವೇರಿ): ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಹಾವೇರಿಯಲ್ಲಿ ಇಬ್ಬರು ಹಾಗೂ ವಿಜಯಪುರದಲ್ಲಿ ಓರ್ವ ರೈತ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ರಾಣೇಬೆನ್ನೂರು ಪಟ್ಟಣ ಕಂಚಗಾರ ಓಣಿಯ ದಯಾನಂದ ಪಾಟೀಲ (50), ಪರಮೇಶ ಕಾಳಮ್ಮನವರ (46) ಮೃತರು. ಇಂದು ಸಂಜೆ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ಹತ್ತಳ್ಳಿ ಗ್ರಾಮದ ರೈತ ಧರೆಪ್ಪ ಧರ್ಮಪ್ಪ ಬಿರಾದಾರ (45) ಜಾನುವಾರುಗಳಿಗೆ ಮೇವು ತರಲೆಂದು ಎತ್ತಿನ ಗಾಡಿಯಲ್ಲಿ ತೆರಳುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೈತನ ಜೊತೆಗಿದ್ದ ಜೋಡೆತ್ತುಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿವೆ.