ಹಾವೇರಿ: ಜಿಲ್ಲೆಯ ಪೊಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು 26 ವರ್ಷದ ಚಾಂದ ಭಾಷಾ, 28 ವರ್ಷದ ಚಂದ್ರು ಮತ್ತು 38 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ. ಆರೋಪಿತರು ಜಿಲ್ಲೆ ಸೇರಿದಂತೆ ಹಿರೇಕೆರೂರು, ಮುಂಡಗೋಡ ಸೇರಿದಂತೆ ವಿವಿಧೆಡೆ ನಕಲಿ ಕೀಗಳನ್ನು ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿತರಿಂದ 2 ಲಕ್ಷ 8 ಸಾವಿರ ರೂಪಾಯಿ ಮೌಲ್ಯದ 8 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕದ್ದ ಬೈಕ್‌ಗಳನ್ನು ವಿವಿಧ ಕಾರಣ ಹೇಳಿ ಸಿಕ್ಕ ದರಕ್ಕೆ ಮಾರುತ್ತಿದ್ದರು ಎನ್ನಲಾಗಿದೆ.
ಇನ್ನು ಆರೋಪಿಗಳು ಬೇರೆ ಕಡೆ ವಾಹನಗಳನ್ನಿಟ್ಟಿರುವ ಶಂಕೆಯನ್ನು ಎಸ್ಪಿ ಕೆ.ಜಿ.ದೇವರಾಜ್ ವ್ಯಕ್ತಪಡಿಸಿದ್ದಾರೆ. ಕಳ್ಳರನ್ನು ಹಿಡಿಯಲು ಯಶಸ್ವಿಯಾಗಿರುವ ಡಿವೈಎಸ್ಪಿ ವಿಜಯ್ ಕುಮಾರ್ ತಂಡಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.