ರಾಣೆಬೆನ್ನೂರು: ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸೆ.3ಕ್ಕೆ ಒಂದು ವರ್ಷ ಕಳೆದಿದ್ದರೂ ಈವರೆಗೂ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದ ರಾಣೆಬೆನ್ನೂರು ನಗರಸಭಾ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ.
2018ರ ಆ.31ರಂದು ರಾಣೆಬೆನ್ನೂರು ನಗರಸಭೆಗೆ ಚುನಾವಣೆ ನಡೆದು, ಸೆ.3ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು. ಅಂದೇ ರಾತ್ರಿ ಸಮ್ಮಿಶ್ರ ಸರ್ಕಾರ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೂ ಮೀಸಲಾತಿ ಪ್ರಕಟಿಸಿತ್ತು. ಅದರಂತೆ ನಗರಸಭೆ ಅಧ್ಯಕ್ಷ ಹುದ್ದೆಗೆ ಹಿಂದುಳಿದ ಮಹಿಳೆ, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ನಗರಸಭಾ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಅವರು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಹಾಗೆಯೇ ರಾಜ್ಯದ ವಿವಿಧೆಡೆಯಲ್ಲೂ ಅಲ್ಲಿನ ಚುನಾಯಿತ ಪ್ರತಿನಿಧಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಮೀಸಲಾತಿ ಸಂಬಂಧಿಸಿದಂತೆ ವ್ಯಾಜ್ಯ ದಾಖಲಾದ ಹಿನ್ನೆಲೆಯಲ್ಲಿ ರಾಜ್ಯದ ಉಳಿದ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಬರುವುದಕ್ಕೆ ತಡೆಯಾದ ಪರಿಣಾಮ ಆಡಳಿತವಿಲ್ಲದೆ ಕಾಲ ಕಳೆಯುವಂತಾಗಿದೆ.
ಅಭಿವೃದ್ಧಿ ಕುಂಠಿತ: ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅಧಿಕಾರಿಗಳದ್ದೇ ಕಾರುಬಾರು ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಸಿದಿವೆ ಎಂಬ ಆರೋಪಗಳು ಕೇಳಿಬಂದಿವೆ. ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣಪತ್ರ ಅಷ್ಟೇ ಸಿಕ್ಕಿವೆ. ಉಳಿದಂತೆ ಪೂರ್ಣ ಪ್ರಮಾಣದ ಅಧಿಕಾರಕ್ಕಾಗಿ ಕಾದು ಕುಳಿತಿದ್ದಾರೆ.