ಹಾವೇರಿ: ಡೆಲ್ಟಾ ಪ್ಲಸ್ ವೈರಸ್ ಎದುರಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಡೆಲ್ಟಾ ವೈರಸ್ ಮೊದಲು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಾಣಿಸಿಕೊಂಡಿದೆ. ದೇಶದಲ್ಲಿ ಈ ಸೋಂಕು 35 ರಿಂದ 50 ಜನರಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಇದರ ಪ್ರಕಾರಗಳ ಕುರಿತಂತೆ ಲ್ಯಾಬ್‌ನಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಇದಲ್ಲದೆ ಇದಕ್ಕೆ ಲಸಿಕೆ ಪರಿಣಾಮ ಬೀರುತ್ತಾ ಇಲ್ಲವೋ ಎಂಬುದನ್ನ ಸಹ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆಯಾಗಿ ಡೆಲ್ಟಾ ಪ್ಲಸ್ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯುಷ್ ವೈದ್ಯರನ್ನು ಕೋವಿಡ್ 3ನೇ ಅಲೆ ಎದುರಿಸಲು ಸೇವೆಗೆ ಬಳಸಿಕೊಳ್ಳುವ ಕುರಿತಂತೆ ಮಾತನಾಡಿದ ಅವರು, ಈ ಕುರಿತಂತೆ ಆರೋಗ್ಯ ಸಚಿವರ ಜೊತೆ ತಾವು ಮಾತನಾಡಿದ್ದಾಗಿ ತಿಳಿಸಿದರು. ಕಳೆದ ವರ್ಷ ಕೊರೊನಾ ಮೊದಲನೆ ಅಲೆ ಮತ್ತು ಈ ವರ್ಷದ 2ನೇ ಅಲೆಯಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಎಂಬಿಬಿಎಸ್ ಇಲ್ಲದ ಸ್ಥಳಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 3ನೇ ಅಲೆ ಎದುರಿಸಲು ಸಹ ಅವರ ಅವಶ್ಯಕತೆ ಇದೆ. ಹೀಗಾಗಿ ಅವರನ್ನು ಮುಂದುವರೆಸಲು ತಮ್ಮಿಂದ ತಾತ್ವಿಕ ಒಪ್ಪಿಗೆ ಇದೆ. ಈ ಕುರಿತಂತೆ ಎರಡು-ಮೂರು ದಿನಗಳಲ್ಲಿ ಆರೋಗ್ಯ ಸಚಿವರು ತಿಳಿಸಲಿದ್ದಾರೆ ಎಂದರು.
ಓದಿ: ಕಾಲೇಜುಗಳ ಆರಂಭಕ್ಕೆ ಮುಹೂರ್ತ ಫಿಕ್ಸ್.. ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದೇನು?