ಹಾವೇರಿ: ಜಿಲ್ಲೆಯಲ್ಲಿ ಸಹಸ್ರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ ಕಾರ್ಖಾನೆ ಮಾಲೀಕರು ಸಮಯಕ್ಕೆ ಸರಿಯಾಗಿ ಹಣ ನೀಡುತ್ತಿಲ್ಲ. ಜೊತೆಗೆ ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣ ಸಹ ಕಡಿಮೆ ತೋರಿಸಿ ಕಡಿಮೆ ದರ ನಿಗದಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಇದೀಗ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳ ರೈತರು ಉತ್ತರ ಕಂಡುಕೊಂಡಿದ್ದಾರೆ.
ಹೌದು, ಕಬ್ಬು ಬೆಳೆಗಾರರು ತಮ್ಮ ತಮ್ಮ ಜಮೀನುಗಳಲ್ಲಿ ಬೆಲ್ಲ ತಯಾರಿಸುವ ಆಲೆಮನೆಗಳನ್ನು ಸ್ಥಾಪಿಸಿದ್ದಾರೆ. ತಾವು ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ, ರಾಜ್ಯದ ವಿವಿಧಡೆ ರಪ್ತು ಮಾಡುತ್ತಿದ್ದಾರೆ. ಜೊತೆಗೆ ಬೆಲ್ಲದ ವರ್ತಕರು ಸಹ ಈಗ ಆಲೆಮನೆಗೆ ಬಂದು ಬೆಲ್ಲ ಖರೀದಿಸುತ್ತಿದ್ದಾರೆ.
ಸಿಂಗಾಪುರದ ಬಸವಣ್ಣೆಪ್ಪ ಬೆಂಚಿಹಳ್ಳಿ ಎಂಬುವರು ಮೊದಲು ಮಂಡ್ಯಕ್ಕೆ ಹೋಗಿ ಅಲ್ಲಿಯ ಆಲೆಮನೆಗಳನ್ನ ನೋಡಿಕೊಂಡು ಬಂದು ತಮ್ಮ ಗ್ರಾಮದಲ್ಲಿ ಆಲೆಮನೆ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇದರಿಂದ ಉತ್ತೇಜನಗೊಂಡ ತಾಲೂಕಿನ ಹಲವು ಗ್ರಾಮದ ರೈತರು, ಆಲೆಮನೆಗಳ ಸ್ಥಾಪನೆಗೆ ಮುಂದಾಗಿದ್ದಾರೆ.
ಹಾನಗಲ್ ತಾಲೂಕಿನಲ್ಲಿ 50 ಕ್ಕೂ ಅಧಿಕ ಆಲೆಮನೆಗಳು ಪ್ರತಿ ವರ್ಷ ಬೆಲ್ಲ ತಯಾರಿಸುತ್ತಿವೆ. ಆಲೆಮನೆಗಳ ಮಾಲೀಕರು ಮೊದಲು ತಮ್ಮ ಜಮೀನಿನ ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ ನಂತರ ತಮ್ಮ ಅಕ್ಕ- ಪಕ್ಕದ ರೈತರ ಕಬ್ಬನ್ನ ಸಹ ಬಾಡಿಗೆ ರೂಪದಲ್ಲಿ ಪಡೆದು ಬೆಲ್ಲ ತಯಾರಿಸುತ್ತಾರೆ. ಇದರಿಂದ ತಮಗೆ ನೆಮ್ಮದಿ ಇದೆ ಎನ್ನುತ್ತಾರೆ ರೈತರು.
ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ವೇಳೆ ನಾವು ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುತ್ತಿದ್ದೆವು. ಮೊದಲು ಕಬ್ಬು ಜಮೀನಿನಲ್ಲಿ ಒಣಗುತ್ತಿತ್ತು, ನಂತರ ಕಾರ್ಖಾನೆಯಲ್ಲಿ ಒಣಗುತ್ತಿತ್ತು. ನಾವು ನಿರೀಕ್ಷೆ ಮಾಡಿದಷ್ಟು ಸಕ್ಕರೆ ಪ್ರಮಾಣ ತೋರಿಸುತ್ತಿರಲಿಲ್ಲ. ಇದೆಲ್ಲಾ ಮುಗಿದ ಮೇಲೆ ಹಣಕ್ಕಾಗಿ ಕಾರ್ಖಾನೆಗೆ ಅಲೆದಾಡಬೇಕಿತ್ತು.
ಆದರೆ, ಬೆಲ್ಲದ ಆಲೆಮನೆಗಳಲ್ಲಿ ಈ ರೀತಿಯಾಗುವುದಿಲ್ಲ. ಒಂದು ಟನ್ ಕಬ್ಬಿಗೆ ಒಂದು ಕ್ಟಿಂಟಾಲ್ 30 ಕೆ.ಜಿ ಬೆಲ್ಲ ಬರುತ್ತದೆ. ಕನಿಷ್ಠ ಕೆಜಿಗೆ 32 ರೂಪಾಯಿ ಬೆಲೆ ಸಿಕ್ಕರೂ ತಮಗೆ ಹಾನಿಯಿಲ್ಲ. ಕೆಜಿಗೆ 32 ರೂಪಾಯಿಗಿಂತ ಹೆಚ್ಚಿಗೆ ಆದರೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ ಎನ್ನುತ್ತಿದ್ದಾರೆ ಆಲೆಮನೆ ಮಾಲೀಕರು.
ಆಲೆಮನೆಯಲ್ಲಿ ಕೆಲಸ ಮಾಡಲು ಬಿಹಾರ ಸೇರಿದಂತೆ ಗ್ರಾಮಗಳಲ್ಲಿ ಹತ್ತಾರು ಜನರಿಗೆ ಉದ್ಯೋಗ ನೀಡಿದ ತೃಪ್ತಿ ಸಹ ನಮಗಿದೆ. ಆಲೆಮನೆಗಳಲ್ಲಿ ಉತ್ತಮ ಗುಣಮಟ್ಟದ ಬೆಲ್ಲ ತಯಾರಿಸಲಾಗುತ್ತದೆ. ನಮಗೆ ಸರ್ಕಾರ ಹಾವೇರಿಯಲ್ಲಿ ಒಂದು ಬೆಲ್ಲದ ಮಾರುಕಟ್ಟೆ ಸ್ಥಾಪನೆ ಮಾಡಿದರೆ ಸಾಕು, ಇನ್ನಷ್ಟು ಲಾಭ ಗಳಿಸಬಹುದು ಎಂದು ಸ್ಥಳೀಯ ಕಬ್ಬು ಬೆಳೆಗಾರರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿ ನಷ್ಟ ಅನುಭವಿಸುತ್ತಿದ್ದ ಕಬ್ಬು ಬೆಳೆಗಾರರು, ಇದೀಗ ಆಲೆಮನೆಗಳಲ್ಲಿ ಬೆಲ್ಲ ತಯಾರಿಸಿ ಅಧಿಕ ಲಾಭಗಳಿಸುತ್ತಿದ್ದಾರೆ. ಕಾರ್ಖಾನೆಯಿಂದ ಕಹಿಯಾಗಿದ್ದ ಇವರ ಬದುಕು ಆಲೆಮನೆಯಿಂದ ಸಿಹಿಯಾಗಿ ಪರಿಣಮಿಸಿದೆ.