ರಾಣೆಬೆನ್ನೂರು : ಸಿಎಂ ಯಡಿಯೂರಪ್ಪ ಅವರು ನನ್ನನ್ನು ಎಂಎಲ್ಸಿ ಮಾಡಿ ಸಚಿವರಾಗಿ ಮಾಡುತ್ತೇನೆ ಎಂಬ ಭರವಸೆ ನೀಡಿದ ಹಿನ್ನೆಲೆ, ಬಿಜೆಪಿ ಟಿಕೆಟ್ ಬಿಟ್ಟು ಕೊಟ್ಟಿದ್ದೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದರು.
ಅರುಣ್ ಕುಮಾರ ಪೂಜಾರಿಗೆ ಟಿಕೆಟ್ ಘೋಷಣೆ ನಂತರ ರಾಣೆಬೆನ್ನೂರಿಗೆ ಆಗಮಿಸಿದ ಅನರ್ಹ ಶಾಸಕ ಆರ್. ಶಂಕರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್.ಯಡಿಯೂರಪ್ಪರ ಸರ್ಕಾರವನ್ನು ಸುಭದ್ರಗೊಳಿಸುವ ಸಲುವಾಗಿ ನಾನು ಈ ತ್ಯಾಗ ಮಾಡಬೇಕಾಯಿತು. ನಾನು ಯಾರಿಗೂ ಹೆದರಿ ಕಣದಿಂದ ಹಿಂದಕ್ಕೆ ಸರಿದಿಲ್ಲ. ಕೆಲವರು ಸೋಲಿನ ಭಯದಿಂದ ಶಂಕರ್ ಅವರು ಚುನಾವಣೆಗೆ ನಿಂತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಐವತ್ತು ವರ್ಷ ರಾಜಕೀಯ ಮಾಡಿದ ಮಾಜಿ ಸ್ಪೀಕರ್ ಸೋಲಿಸಿದ ನನಗೆ ಈ ಉಪಚುನಾವಣೆ ಯಾವ ಲೆಕ್ಕ? ಎಂದು ತಿರುಗೇಟು ನೀಡಿದರು.
ಸದ್ಯ ನಾನು ಬಿಜೆಪಿ ಸೇರಿದ್ದೇನೆ. ಹೈಕಮಾಂಡ್ ಹೇಳಿದ್ದರಿಂದ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ. ಕ್ಷೇತ್ರದ ಕೆಪಿಜೆಪಿ ಬೆಂಬಲಿಗರಿಗೆ ನೋವಾಗಿದೆ ಎಂಬುದು ನನಗೆ ಗೊತ್ತು. ಆದರೆ ಕ್ಷೇತ್ರದ ಹಿತದೃಷ್ಟಿಯಿಂದ ಇದು ಅನಿವಾರ್ಯ ಎಂದರು.