ಹಾವೇರಿ: ಉತ್ತರ ಕರ್ನಾಟಕದ ಜಾನಪದ ಸೊಗಡಿನ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳನ್ನ ಅದರ ಮಾಲೀಕರು ಮತ್ತು ಅಭಿಮಾನಿಗಳು ಸೆಲೆಬ್ರಿಟಿಗಳಂತೆ ನೋಡಿಕೊಳ್ಳುತ್ತಾರೆ. ಈ ರೀತಿಯ ಹೋರಿಯನ್ನು ಮನೆಗೆ ತಂದ ದಿನವನ್ನು ಜನ್ಮದಿನವಾಗಿ ಆಚರಿಸುವುದು ವಾಡಿಕೆ.
ಈ ರೀತಿ ದನಬೆದರಿಸುವ ಸ್ಪರ್ಧೆಯಲ್ಲಿ ದೂಳೆಬ್ಬಿಸಿದ್ದ ಹೋರಿ ರಾಕ್ಸ್ಟಾರ್ ಜನ್ಮದಿನವನ್ನು ಬುಧವಾರ ಮಾಲೀಕ ಮತ್ತು ಅದರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ನಗರದ ನಾಗೇಂದ್ರನಮಟ್ಟಿಯಲ್ಲಿ ನಡೆದ ಜನ್ಮದಿನ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಸುತ್ತಲಿನ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳು ಪುಷ್ಪಮಾಲೆ ಮತ್ತು ಕೇಕ್ ತಂದಿದ್ದರು. ಹೋರಿಗೆ ಸೇವಂತಿ, ಚೆಂಡು, ಗುಲಾಬಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಸುಮಾರು 20 ಕೆಜಿ ತೂಕದ ಕೇಕ್ ಕೂಡ ಕತ್ತರಿಸಲಾಯಿತು. ಈ ಕುರಿತಂತೆ ಮಾತನಾಡಿದ ಹೋರಿ ಮಾಲೀಕ ಮಾರುತಿ, ಹೋರಿಯನ್ನು 20 ವರ್ಷಗಳ ಹಿಂದೆ ತಮಿಳುನಾಡಿನಿಂದ ತರಲಾಗಿದೆ. ತಮಿಳುನಾಡಿನಿಂದ ತಂದಾಗ ಸ್ಪರ್ಧೆಗೆ ಬಿಡಲಾಯಿತು. ಗಾಡಾ ಸ್ಪರ್ಧೆಯಲ್ಲಿ ಸಾಕಷ್ಟು ಹೆಸರು ಮಾಡಿದ ಕಾರಣ ಈ ಹೋರಿಗೆ ರಾಕಸ್ಟಾರ್ ಎಂದು ನಾಮಕರಣ ಮಾಡಿ ದನ ಬೆದರಿಸುವ ಸ್ಪರ್ಧೆಗೆ ಬಿಡಲಾಯಿತು ಎಂದರು.
ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ದನಬೆದರಿಸುವ ಸ್ಪರ್ಧೆಯಲ್ಲಿ ಈ ಹೋರಿ ಸಾಕಷ್ಟು ಹೆಸರು ಮಾಡಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹೊರ ರಾಜ್ಯವಾದ ತಮಿಳುನಾಡಿನಲ್ಲೂ ಸಹ ಇದು ತನ್ನ ವರಸೆ ತೋರಿಸಿ ಬಹುಮಾನಗಳನ್ನ ಗೆದ್ದುಕೊಂಡಿತ್ತು. ಹೋರಿಗೆ ಈಗ ವಯಸ್ಸಾಗಿರುವ ಕಾರಣ ಮಾಲೀಕ ಅದನ್ನ ಸ್ಪರ್ಧೆಗೆ ಬಿಡುತ್ತಿಲ್ಲ.
ಇದನ್ನೂ ಓದಿ: ಕೊಬ್ಬರಿ ಹೋರಿ 'ರಾಕ್ಷಸ 220' ಹುಟ್ಟುಹಬ್ಬ: 30 ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ
ಆದರೆ, ಹೋರಿ ಜೀವಂತ ಇರುವಾಗ ಒಮ್ಮೆ ಅದ್ಧೂರಿಯಾಗಿ ಜನ್ಮದಿನ ಆಚರಿಸಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಹೀಗಾಗಿ 20 ವರ್ಷ ತುಂಬಿದ ಕಾರಣ ನಿನ್ನೆ ದಿನ ರಾಕ್ಸ್ಟಾರ್ ಜನ್ಮದಿನ ಅದ್ಧೂರಿಯಾಗಿ ಆಚರಿಸಲಾಯಿತು ಎಂದು ಮಾಲೀಕ ಮಾರುತಿ ತಿಳಿಸಿದ್ದಾರೆ.
ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಗಳು ಹೋರಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. ಈ ಕುರಿತಂತೆ ಮಾತನಾಡಿದ ಅಭಿಮಾನಿ ಚೇತನ್, ರಾಕ್ಸ್ಟಾರ್ ಗುಣಗಾನ ಮಾಡಿದರು. ಕಳೆದ ಐದು ವರ್ಷಗಳಿಂದ ಹೋರಿಯ ಅಭಿಮಾನಿಯಾಗಿದ್ದು, ರಾಕ್ಸ್ಟಾರ್ ಓಡುವ ಸ್ಟೈಲ್ ನೋಡಿ ಅದರ ಅಭಿಮಾನಿ ಆಗಿರುವುದಾಗಿ ಚೇತನ್ ತಿಳಿಸಿದರು.
ಅಭಿಮಾನಿಗಳಿಂದ ರಕ್ತದಾನ: ಇತ್ತೀಚೆಗೆ ಕೆರಿಮತ್ತಿಹಳ್ಳಿ ಗ್ರಾಮದ ಕೊಬ್ಬರಿ ಹೋರಿ 'ರಾಕ್ಷಸ 220' ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ವೇಳೆ ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳು ಜನ್ಮದಿನದ ನಿಮಿತ್ತ ಸುಮಾರು 30ಕ್ಕೂ ಅಧಿಕ ಜನರು ರಕ್ತದಾನ ಸಹ ಮಾಡಿದ್ದರು.
ಇದನ್ನೂ ಓದಿ: ಹಾವೇರಿಯಲ್ಲಿ ಮನಸೆಳೆದ ದನ ಬೆದರಿಸುವ ಸ್ಪರ್ಧೆ: ಹೋರಿಗಳಿಗೆ ಕಟ್ಟಿದ ಕೊಬ್ಬರಿ ಕಿತ್ತುಕೊಳ್ಳಲು ಪೈಲ್ವಾನರ ಹರಸಾಹಸ