ಹಾವೇರಿ : ಬೆಂಗಳೂರಿನಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಜನರ ಸಮಸ್ಯೆಯ ಅರಿವಿಲ್ಲ. ಅವರಿಗೆ ಗ್ರಾಮೀಣ ಭಾಗದ ಜನರ ಸಂಬಂಧವಿಲ್ಲ, ಏನು ಬೇಕು ಅದನ್ನ ಆದೇಶ ಮಾಡುತ್ತಾರೆ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪದಲ್ಲಿ ನಡೆದ ಕಂದಾಯ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ಬದುಕಿನ ಕಷ್ಟ ಮತ್ತು ಸಮಸ್ಯೆಯ ನಿಜವಾದ ಅರಿವು ತಮಗಿದೆ. ಜನರ ಜೊತೆ ನಿತ್ಯ ಇರುವವರು ನಾವು, ನಮಗೆ ಜನರ ಸಮಸ್ಯೆಗಳ ಬಗ್ಗೆ ನಿಜವಾದ ಅರಿವಿದೆ. ರಾಜ್ಯದಲ್ಲಿ ಈಗಾಗಲೇ ಇರುವ ಇ-ಸ್ವತ್ತು ವ್ಯವಸ್ಥೆಗೆ ಶೀಘ್ರದಲ್ಲೇ ವಿದಾಯ ಹೇಳುತ್ತೇವೆ. ನಮ್ಮ ಅನುಭವದ ಮೇಲೆ ಹೊಸ ಇ-ಸ್ವತ್ತು ಯೋಜನೆ ಜಾರಿಗೆ ತರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಕಾಲೆಳೆದ ಸಚಿವರು, ಉಪಚುನಾವಣೆಯಲ್ಲಿ ಮಾನೆಗೆ ಬಹಳ ಕಷ್ಟ ನೀಡಿದ್ದೇವೆ. ಆದರೆ ಚುನಾವಣೆಯಲ್ಲಿ ತಮ್ಮ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇವೆ ಅಷ್ಟೇ. ಇಷ್ಟೆಲ್ಲಾ ಕಷ್ಟದ ನಡುವೆ ಸಹ ಶ್ರೀನಿವಾಸ್ ಮಾನೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಎಂದು ಶುಭಾಶಯ ಕೋರಿದರು.
ಇದೇ ವೇಳೆ ಮೇಕೆದಾಟು ವಿಚಾರದ ಬಗ್ಗೆ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಹಾದಾಯಿ, ಆಲಮಟ್ಟಿ ಮತ್ತು ಮೇಕೆದಾಟು ಯೋಜನೆಗಳ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡುತ್ತೇವೆ. ಮೂರು ಯೋಜನೆಗಳ ಕುರಿತಂತೆ ಸರ್ವಪಕ್ಷಗಳ ನಿಯೋಗ ತಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.