ಹಾವೇರಿ: ರಷ್ಯಾ-ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್(21) ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರಿದ್ದಾರೆ. ಮೃತ ನವೀನ್ ಬಹಳ ಧೈರ್ಯಶಾಲಿ. ಕಳೆದ ನಾಲ್ಕೈದು ತಿಂಗಳ ಹಿಂದೆ ನವೀನ್ ಊರಿಗೆ ಬಂದಿದ್ದ. ಆದ್ರೀಗ ಆತ ಇಲ್ಲ ಅನ್ನೋ ನೋವು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ನವೀನ್ ಸಂಬಂಧಿ ಮೋಹನ್ ತಮ್ಮ ನೋವನ್ನು ವ್ಯಕ್ತಪಡಿಸಿದರು.
ನವೀನ್ ಸಾವು ಬಹಳ ಆಘಾತ ತಂದಿದೆ. ನಾಲ್ಕು ದಿನಗಳ ಹಿಂದೆ ನಾವೇ ಖುದ್ದು ಕರೆ ಮಾಡಿ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದೆವು. ಯುದ್ಧ ಸುಮಾರು ಮೂರು ಕಿ.ಮೀ ದೂರದಲ್ಲಿ ನಡೆಯುತ್ತಿದೆ. ಸದ್ಯ ನನಗೆ ಯಾವುದೇ ತೊಂದರೆ ಆಗಿಲ್ಲ. ಇಲ್ಲಿ ಯುದ್ಧ ನಿಲ್ಲುತ್ತೆ. ಬಳಿಕ ನಾನು ವ್ಯಾಸಂಗ ಮುಗಿಸಿಯೇ ಊರಿಗೆ ಮರಳುವೆ. ಭಾರತಕ್ಕೆ ಹೋಗುವವರು ಹೋಗಲಿ, ಆದ್ರೆ ನಾನು ಮಾತ್ರ ಬರುವುದಿಲ್ಲ ಎಂದು ಹೇಳಿದ್ದನು. ಆದ್ರೆ ಶೆಲ್ ದಾಳಿಗೆ ಬಲಿಯಾಗಿರುವುದು ನಮಗೆ ನೋವು ತಂದಿದೆ ಎಂದರು.
ಇದನ್ನೂ ಓದಿ: Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳು ಇಂತಿವೆ
ನಾನು ಅವನನ್ನು ಚಿಕ್ಕವನಿಂದಲೂ ನೋಡಿದ್ದೇನೆ. ಅವನಿಗೆ ಧೈರ್ಯ ಹೆಚ್ಚು, ಆದರೆ ಆಹಾರ ಸಾಮಗ್ರಿ ತರಲು ಹೊರ ಹೋದಾಗ ಈ ದುರ್ಘಟನೆ ನಡೆದಿದೆ. ನವೀನ್ ಮೃತಪಟ್ಟಿರುವ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿದೆ. ಉಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಮೊದಲು ಇತರ ಮಕ್ಕಳನ್ನು ಕರೆತರಬೇಕು. ಅರ್ಧಕ್ಕೆ ಮೊಟಕಾಗಿರುವ ಅವರ ಶಿಕ್ಷಣ ಪೂರ್ಣಗೊಳಿಸಲು ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮೋದಿಯವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೆನ್ನಾಗಿದ್ದಾರೆ, ಅವರನ್ನು ಸಂಪರ್ಕಿಸಿ ರಷ್ಯಾ ಬಾರ್ಡರ್ ಮೂಲಕ ಉಳಿದ ಮಕ್ಕಳನ್ನು ಕರೆ ತರಬೇಕು ಎಂದರು.