ರಾಣೆಬೆನ್ನೂರು: ಕರ್ನಾಟಕ ವೈಭವ ನಿಮಿತ್ತ ಬೆಳಗ್ಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಕರ್ನಾಟಕ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಣ್ಮನಸೆಳೆಯಿತು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಮೆರವಣಿಗೆಗೆ ಚಾಲನೆ ನೀಡಿದರು. ಅನಂತರ ನಗರದ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಕೋರ್ಟ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ವೃತ್ತ, ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ವೇದಿಕೆಗೆ ಆಗಮಿಸಿತು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಜನಪದ ಕಲೆಗಳಾದ ಜಗ್ಗಲಗಿ, ಸಮಾಳ, ದೊಡ್ಳುಕುಣಿತ, ಹುಲಿ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಬೇಡರ ಕುಣಿತ, ನವಿಲು ಕುಣಿತ, ಗೊಂಬೆ ಕುಣಿತ, ಹಲಗೆ, ಭಜಂತ್ರಿ, ಕರಡಿ ಮಜಲುಗಳನ್ನು ಪ್ರದರ್ಶಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು.