ರಾಣೆಬೆನ್ನೂರು: ನಗರದ ಹೃದಯ ಭಾಗವೆನಿಸಿಕೊಂಡಿರುವ ಬಸ್ ನಿಲ್ದಾಣದ ಹತ್ತಿರ ನಿರ್ಮಾಣ ಮಾಡಿರುವ ಸಾರ್ವಜನಿಕ ಮೇಲ್ಸೇತುವೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ನಗರಸಭೆ ಅನುದಾನದಡಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಮೇಲ್ಸುತೇವೆ ಉಪಯೋಗಕ್ಕೆ ಬಾರದಂತಾಗಿದೆ. ಸಾರ್ವಜನಿಕ ಮೇಲ್ಸೇತುವೆ ನಿರ್ಮಾಣ ಮಾಡಿ ಒಂದು ವರ್ಷವಾಗಿದ್ದು, ಮೇಲ್ಸೇತುವೆಯನ್ನು ಸಂಪೂರ್ಣ ಕಬ್ಬಿಣವನ್ನು ಬಳಸಿ ನಿರ್ಮಿಸಲಾಗಿದೆ. ಆದರೆ ಸೇತುವೆ ಪಕ್ಕದಲ್ಲಿಯೇ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮೇಲ್ಸೇತುವೆಗೆ ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮೇಲ್ಸೇತುವೆ ಬಳಸದೆ ರಾಷ್ಟ್ರೀಯ ಹೆದ್ದಾರಿಯನ್ನೇ ಬಳಸುತ್ತಿದ್ದಾರೆ.
ಈ ಕುರಿತು ಅನೇಕ ಬಾರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇತುವೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕೂಡ, ಯಾವೊಬ್ಬ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರಾದ ಬೀರಪ್ಪ ಲಮಾಣಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಸ್ ನಿಲ್ದಾಣ ಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ, ಕೋರ್ಟ್, ಶಾಲೆ, ಕಾಲೇಜು ಇರುವ ಹಿನ್ನೆಲೆ ಸಾರ್ವಜನಿಕ ದಟ್ಟಣೆ ಕೂಡ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಜತೆಗೆ ಅಪಘಾತಗಳೂ ಹೆಚ್ಚಾಗಿ ಸಂಭವಿಸುತ್ತಿವೆ ಎನ್ನುವ ದೂರುಗಳು ಇಲ್ಲಿ ಸಾಮಾನ್ಯವಾಗಿವೆ.