ರಾಣೆಬೆನ್ನೂರ : ಪುನೀತ್ ರಾಜ್ಕುಮಾರ್ ಅಭಿಮಾನಿಯೋರ್ವ ಸೈಕಲ್ ಮೂಲಕ ಬೆಂಗಳೂರಿಗೆ ತೆರಳಿ ಅಪ್ಪು ಸಮಾಧಿ ದರ್ಶನ ಮಾಡಲು ಮುಂದಾಗಿದ್ದಾನೆ.
ರಾಣೆಬೆನ್ನೂರ ತಾಲೂಕಿನ ಹಿರೇಬಿದರಿ ಗ್ರಾಮದ ಸಿದ್ದು ಮಲ್ಲಾಪುರ ಎಂಬ ಯುವಕನಿಗೆ ದೊಡ್ಮನೆ ಕುಟುಂಬದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಎಲ್ಲರೂ ಹತ್ತಿರವಾಗಿದ್ದಾರೆ. ಪ್ರತಿ ವರ್ಷವೂ ಅಪ್ಪು ಹುಟ್ಟು ಹಬ್ಬದಂದು ರೈಲು ಹಿಡಿದು ಬೆಂಗಳೂರಿಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದ. ಆದರೆ, ಅಪ್ಪು ಇಲ್ಲದ ಕಾರಣ ಸಿದ್ದು ಸಾಕಷ್ಟು ನೊಂದಿದ್ದಾನೆ.
ಪುನೀತ್ ರಾಜ್ ಕುಮಾರ್ ನಿಧನರಾದ ಸಮಯದಲ್ಲಿ ಬೆಂಗಳೂರಿಗೆ ತೆರಳಿದರು ಸಹ ಅಂತಿಮ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಈಗ ಸೈಕಲ್ ಮೂಲಕ ಸಮಾಧಿ ದರ್ಶನ ಮಾಡಬೇಕು ಎಂಬ ಅಭಿಮಾನದಿಂದ ಮೈಮೇಲೆ ನಟ ಅಪ್ಪು ಚಿತ್ರ ಬಿಡಿಸಿಕೊಂಡು ಸೈಕಲ್ ಮೇಲೆ ಸಮಾಧಿ ದರ್ಶನಕ್ಕೆ ಹೊರಟಿದ್ದಾನೆ.
ಸಿದ್ದು ಮಲ್ಲಾಪುರ ಪ್ರತಿವರ್ಷವೂ ಸಹ ಪುನೀತ್ ರಾಜ್ಕುಮಾರ ಹುಟ್ಟು ಹಬ್ಬದ ದಿನದಂದು ಮೈಮೇಲೆ ಅವರದ್ದೆ ಚಿತ್ರ ಬರೆಸಿಕೊಂಡು ಹೋಗಿ ಶುಭಾಶಯ ಕೋರುತ್ತಿದ್ದರು. ಆದರೆ, ಪುನೀತ್ ರಾಜ್ಕುಮಾರ್ ನಿಧನರಾದ ಹಿನ್ನೆಲೆ ನೆಚ್ಚಿನ ನಟನ ಸಮಾಧಿ ದರ್ಶನ ಪಡೆಯಲು ಸುಮಾರು 300 ಕಿ.ಮೀ ಸೈಕಲ್ ತುಳಿದು ಹೋಗುತ್ತಿರುವುದು ವಿಶೇಷವಾಗಿದೆ. ಇದಕ್ಕೆ ರಾಣೆಬೆನ್ನೂರ ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಘದ ಅಧ್ಯಕ್ಷರಾದ ಪ್ರಕಾಶ ಬುರಡಿಕಟ್ಟಿ ಸಿದ್ದುಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ.