ಹಾವೇರಿ: ಎಲ್ಲ ರಾಜಕೀಯ ಪಕ್ಷದವರಿಗೂ ಮತಕ್ಕೆ, ಪ್ರಚಾರಕ್ಕೆ, ಅಧಿಕಾರಕ್ಕೆ ಹಾಗು ಸ್ವಾರ್ಥಕ್ಕೆ ರೈತರು ಬೇಕು. ಆದರೆ ರೈತರ ಕಷ್ಟ ಸುಖಗಳಿಗೆ ಸ್ಪಂದಿಸುವಷ್ಟು ರಾಜಕೀಯ ವ್ಯವಸ್ಥೆ ಬದ್ಧವಾಗಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.
ಗುರುವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶ್ಯಾಡಂಬಿಯಲ್ಲಿ 'ಕರ್ಣಾರ್ಜುನ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಮಹದಾಯಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಶಿಲಾನ್ಯಾಸ ನಡೆದು ನಲವತ್ತು ವರ್ಷಗಳಾದರೂ ಈ ಯೋಜನೆ ಜಾರಿಯಾಗಿಲ್ಲ, ಜಾರಿ ಆಗುವುದೂ ಇಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆಯ ಒಂದೇ ಒಂದು ಉದಾಹರಣೆ ತಗೆದುಕೊಂಡರೆ ಸಾಕು ಪರಿಸ್ಥಿತಿ ಹೇಗಿದೆ ಎಂದು ಹೇಳಬಹುದು. ಇಂತಹ ನಿರ್ಲಜ್ಜ, ನೀಚ ರಾಜಕೀಯ ವ್ಯವಸ್ಥೆಯನ್ನು ನಾನು ನೋಡಿಲ್ಲ. ಇದಕ್ಕೆ ನನ್ನ ಧಿಕ್ಕಾರವಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ನದಿ ಯೋಜನೆ ಅಂದರೆ ಅಲ್ಲಿಯ ಹಳ್ಳಕೊಳ್ಳಗಳನ್ನು ಸೇರಿಸಿ ನಾಲ್ಕು ಜಿಲ್ಲೆಯ ಜನರಿಗೆ ನೀರುಣಿಸುವ ಯೋಜನೆ. ಅಂದು ನೂರು ಕೋಟಿ ರೂ. ವೆಚ್ಚವಾಗುತ್ತಿದ್ದ ಯೋಜನೆ ಇದೀಗ ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಈ ರಾಜಕೀಯ ನಾಯಕರು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಮುತಾಲಿಕ್ ಹೇಳಿದರು. ಜನರಿಗೆ ಅನ್ನ ಹಾಕುವ ರೈತನ ಸಮಸ್ಯೆಗಳ ಬಗ್ಗೆ ಅವನ ಕಷ್ಟ-ನಷ್ಟಗಳ ಬಗ್ಗೆ ಸ್ಪಂದಿಸದೇ ಇರುವ ವ್ಯವಸ್ಥೆ ಇದೆ ಎಂದು ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸೋದರಲ್ಲಿ ತಪ್ಪೇನಿದೆ: ಮುತಾಲಿಕ್ ಪ್ರಶ್ನೆ
ಸ್ವಾತಂತ್ರ್ಯ ಸಿಕ್ಕ ವೇಳೆಯಲ್ಲಿ ಅದರ ಚುಕ್ಕಾಣಿ ಹಿಡಿದವರು ಹುಟ್ಟಿದ್ದು ಭಾರತದಲ್ಲಾದರೂ ಅವರು ಬೆಳೆದಿದ್ದೆಲ್ಲಾ ವಿದೇಶಗಳಲ್ಲಿ. ಹೀಗಾಗಿ ನಮ್ಮ ಮಣ್ಣಿನ ಸಂಸ್ಕೃತಿ ಅವರಿಗೆ ಗೊತ್ತಾಗಲಿಲ್ಲ. ಅದರ ಪರಿಣಾಮ ದೇಶಕ್ಕೆ ಸ್ವಾತಂತ್ರ ಸಿಕ್ಕಿ 75 ವರ್ಷವಾದರೂ ಕೃಷಿಗೆ ಮಹತ್ವ ಸಿಗಲಿಲ್ಲ. 1947ರಿಂದ ಕೃಷಿಯನ್ನು ನಿರ್ಲಕ್ಷ್ಯ ಮಾಡುತ್ತಾ ಮಾಡುತ್ತಾ ಈ ಸ್ಥಿತಿ ಬಂದಿದೆ ಎಂದು ಅವರು ಹೇಳಿದರು.