ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ: ಕೃಷಿ ಇಲಾಖೆ ವಿರುದ್ಧ ರೈತ ಮಹಿಳೆಯ ಆಕ್ರೋಶ - Ranebennur
ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಕೃಷಿ ಇಲಾಖೆಯಲ್ಲಿ ಕಳಪೆ ಮೆಕ್ಕೆಜೋಳದ ಬಿತ್ತನೆ ಬೀಜ ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ ರೈತ ಮಹಿಳೆಯೋರ್ವರಿಗೆ ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ನೀಡಿರುವ ಆರೋಪ ಕೇಳಿ ಬಂದಿದೆ.
ಕುದರಿಹಾಳ ಗ್ರಾಮದ ರೈತ ಮಹಿಳೆ ಹೊನ್ನವ್ವ ಬಿಷ್ಟಣ್ಣನವರ ತಮ್ಮ 4 ಎಕರೆ ಜಮೀನಲ್ಲಿ ಬಿತ್ತನೆಗಾಗಿ ಮೇಡ್ಲೇರಿ ಗ್ರಾಮದಲ್ಲಿರುವ ಕೃಷಿ ಕೇಂದ್ರದಲ್ಲಿ ಹೈಟೆಕ್ ಕಂಪನಿಯ 6 ಪ್ಯಾಕೆಟ್ ಮೆಕ್ಕೆಜೋಳ ಖರೀದಿಸಿದ್ದಾರೆ. ನಂತರ ಬಿತ್ತನೆ ಸಹ ಮಾಡಿದ್ದಾರೆ. ಆದರೆ ಈಗ ಬೆಳೆ ಬಂದ ಸಮಯದಲ್ಲಿ ಮೆಕ್ಕೆಜೋಳದ ಗಿಡದಲ್ಲಿ ನಾಲ್ಕೈದು ತೆನೆ ಬಿಟ್ಟಿದ್ದು, ಅದರಲ್ಲಿ ಕಾಳು ಇಲ್ಲದಂತಾಗಿದೆ. ಇದರಿಂದ ರೈತ ಮಹಿಳೆ ಆತಂಕ್ಕೊಳಗಾಗಿದ್ದಾರೆ.
ಸಾಲ ಮಾಡಿ ಮೆಕ್ಕೆಜೋಳ ಬೆಳೆದಿದ್ದು, ಈಗ ತೆನೆಯಲ್ಲಿ ಕಾಳು ಇಲ್ಲವಾಗಿದೆ. ಕೃಷಿ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಈವರೆಗೆ ಕೃಷಿ ಇಲಾಖೆಯ ಅಧಿಕಾರಿಗಳ ರೈತ ಮಹಿಳೆಗೆ ಸ್ಪಂದಿಸಿಲ್ಲ ಎನ್ನಲಾಗಿದೆ.