ರಾಣೆಬೆನ್ನೂರು: ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ರೈತ ವಿರೋಧ ಮಾಡಿದ ಹಿನ್ನೆಲೆ ತಹಶೀಲ್ದಾರರ ಎದುರೇ ರೈತನ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಪರಮೇಶ್ವರ ಕಂಬಳಿ ಎಂಬ ರೈತ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ.
ಕಲ್ಲು ಕ್ವಾರಿ ಹಾಗೂ ಅದರ ಅಕ್ಕಪಕ್ಕದ ಜಮೀನಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಕೆಲವು ರೈತರು ಮುಂದಾಗಿದ್ದಾರೆ. ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ ಕಲ್ಲು ಕ್ವಾರಿ ಮಾಲೀಕರು ದೌರ್ಜನ್ಯ ನಡೆಸುವ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ವೇಳೆ, ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ತಹಶೀಲ್ದಾರ್ ಶಂಕರ್. ಜಿ.ಎಸ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಸಮಯದಲ್ಲಿ ರೈತ ಪರಮೇಶ್ವರ ತಹಶೀಲ್ದಾರ್ ಹಾಗೂ ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಸ್ಥಳದಲ್ಲಿದ್ದ ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸ್ ಕಾನಸ್ಟೇಬಲ್ ಹರೀಶ ಹಾಲಬಾವಿ ಮತ್ತು ಮೋಹನ ಮೇಲಗೇರಿ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಪರಮೇಶ್ವರ ಕಂಬಳಿ ಆರೋಪಿಸಿದ್ದಾರೆ.