ಹಾವೇರಿ: ಕೊರೊನಾ ತಪಾಸಣಾ ಕೇಂದ್ರದಲ್ಲಿ ರಾತ್ರಿಯಿಡೀ ರೋಗಿಯೊಬ್ಬ ಪರದಾಡಿದ ಘಟನೆ ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆ ಮತ್ತು ತಪಾಸಣಾ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ್ವರ, ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದ ಶಿವಬಸವನಗರ 38 ವರ್ಷದ ವ್ಯಕ್ತಿ ಖಾಸಗಿ ವೈದ್ಯರು ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಜಿಲ್ಲಾಸ್ಪತ್ರೆ ವೈದ್ಯರು ಕೊರೊನಾ ಲಕ್ಷಣಗಳಿರುವ ಕಾರಣ ಪಕ್ಕದಲ್ಲಿರುವ ತಪಾಸಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ರಾತ್ರಿ 10ಗಂಟೆಯಿಂದ ಮುಂಜಾನೆಯವರೆಗೆ ಕುಳಿತರೂ ಯಾರೂ ತಪಾಸಣೆ ಮಾಡಿಲ್ಲ. ಇದರಿಂದ ಬೇಸತ್ತ ವ್ಯಕ್ತಿಯ ಸಂಬಂಧಿಕರು ರೋಗಿಯನ್ನು ಮುಂಜಾನೆ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಕುಟುಂಬ ಸದಸ್ಯರೇ ಪ್ರತ್ಯೇಕ ಕೊಠಡಿಯಲ್ಲಿರಿಸಿ ಹೆಚ್ಚಿನ ನಿಗಾವಹಿಸಿದ್ದಾರೆ.
