ಹಾವೇರಿ: ಪ್ರತಿಪಕ್ಷದ ನಾಯಕರು ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದು ಕೇವಲ ನೂರಾರು ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ಇದು ಟೇಕಾಫ್ ಅಲ್ವಾ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ರು.
ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ನಡೆದ ಏತನೀರಾವರಿ ಯೋಜನೆಗಳ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ಪ್ರತಿಪಕ್ಷದಲ್ಲಿರುವ ನಾಯಕರು ಅಂದು ಅಧಿಕಾರದಲ್ಲಿದ್ದರು. ಅವರು ಒಂದೂವರೆ ವರ್ಷಗಳ ಕಾಲ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡಿದ್ದೇ ಬಂತು, ಅಂತವರು ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ ಅಂತಿದ್ದಾರೆ. ಟೇಕಾಫ್ ಅಂದ್ರೇ ಏನು ಎಂದು ಬೊಮ್ಮಾಯಿ ಕುಟುಕಿದರು.
ಒಬ್ಬ ರಾಜಕಾರಣಿಗೆ ಮುಂದಿನ ಚುನಾವಣೆ ಮೇಲೆ ಕಣ್ಣಿದ್ರೆ ಒಬ್ಬ ಮುತ್ಸದ್ಧಿಗೆ ಮುಂದಿನ ಜನಾಂಗದ ಬಗ್ಗೆ ಕಣ್ಣಿರುತ್ತೆ. ಮುಂದಿನ ಜನಾಂಗದ ಬಗ್ಗೆ ಕಾಳಜಿ ಇರುವ ಮುತ್ಸದ್ಧಿ ಯಡಿಯೂರಪ್ಪ ಎಂದು ತಿಳಿಸಿದರು.