ರಾಣೆಬೆನ್ನೂರು: ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹೊಲದಲ್ಲಿ ಗೂಡು ಹಾಕಿರುವ ಈರುಳ್ಳಿ ಕೊಳೆತ ಹಿನ್ನೆಲೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರಿದೆ.
ರಾಣೆಬೆನ್ನೂರು ತಾಲೂಕಿನಲ್ಲಿ ಕಳೆದೆರೆಡು ವಾರದಿಂದ ಬಾರಿ ಮಳೆಯಾಗುತ್ತಿದೆ. ಈ ನಡುವೆ, ರೈತರು ಕಳೆದ ತಿಂಗಳು ಈರುಳ್ಳಿ ಕಿತ್ತು ಹೊಲದಲ್ಲಿ ಗೂಡು ಹಾಕಿದ್ದರು. ಆದರೆ, ಒಣಗಿದ ನಂತರ ಮನೆಗೆ ತಂದು ಮಾರಾಟ ಮಾಡುವ ತವಕದಲ್ಲಿದ್ದ ರೈತರಿಗೆ ಮಳೆರಾಯ ರೈತರ ಹೊಟ್ಟೆ ಮೇಲೆ ಬರೆ ಹಾಕಿದ್ದಾನೆ.
ಹವಾಮಾನ ವೈಪರೀತ್ಯದಿಂದ ಸುರಿಯುತ್ತಿರುವ ಮಳೆಗೆ ಹೊಲಗಳಲ್ಲಿ ನೀರು ನಿಂತು, ಈರುಳ್ಳಿ ಕೊಳೆತು ಹೋಗುತ್ತಿದೆ. ತಾಲೂಕಿನ ಬೆನಕನಕೊಂಡ, ಜೋಯಿಸರಹರಳಹಳ್ಳಿ, ಎರೇಕುಪ್ಪಿ ಗ್ರಾಮಗಳಲ್ಲಿ ರೈತರು ಈರುಳ್ಳಿಯನ್ನು ಹೊಲದಿಂದ ಮನೆಗೆ ತರುವುದಕ್ಕೆ ಆಗದ ಹಿನ್ನೆಲೆ ಹೊಲದಲ್ಲಿ ಬಿಟ್ಟಿದ್ದಾರೆ. ಸತತ ಮಳೆಯಿಂದ ಈರುಳ್ಳಿ ಕೊಳೆಯಲಾರಂಭಿಸಿದೆ.
ಮಾರುಕಟ್ಟೆಯಲ್ಲಿ 110 ರೂ. ದಾಟಿದ ಬೆಲೆ: ಸದ್ಯ ರಾಣೆಬೆನ್ನೂರು ಮಾರುಕಟ್ಟೆಗೆ ಈರುಳ್ಳಿ ಆಮದು ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಕೊಂಡುಕೊಳ್ಳುವರು ಗುಣಮಟ್ಟದ ಈರುಳ್ಳಿ ಬೆಲೆಯನ್ನು ಜಾಸ್ತಿ ಮಾಡುತ್ತಿದ್ದಾರೆ. ಇಂದು ಪ್ರತಿ ಕ್ವಿಂಟಲ್ ಈರುಳ್ಳಿ 10,000-11,000 ಸಾವಿರವರಗೆ ಮಾರಾಟವಾಗಿದೆ.
ಕೊಳೆತ ಈರುಳ್ಳಿಗೆ ಬೆಲೆ: ಮಳೆಯಿಂದ ಕೊಳೆತ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಲ್ ಈರಳ್ಳಿ 2,000 ರೂ ಗೆ ಮಾರಾಟವಾಗುತ್ತಿರುವುದು ವಿಶೇಷವಾಗಿತ್ತು.