ಹಾವೇರಿ: ಸಚಿವ ಬಿ.ಸಿ.ಪಾಟೀಲ್ ವೈದ್ಯಕೀಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಗೆ, ಜಿಲ್ಲಾ ಆರೋಗ್ಯಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ರಾಜೇಂದ್ರ ದೊಡ್ಡಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದರ್‌ಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದ್ದಾರೆ.
ಓದಿ: ಮನೆಯಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಬಿ.ಸಿ. ಪಾಟೀಲ್ ಕೊಟ್ಟ ಕಾರಣ ಹೀಗಿದೆ..
ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಮುಂಜಾನೆ ಐದು ಸಿಬ್ಬಂದಿ ಜೊತೆ ಸಚಿವರ ಮನೆಗೆ ತೆರಳಿ ಬಿ.ಸಿ.ಪಾಟೀಲ್ ಮತ್ತು ಅವರ ಪತ್ನಿಗೆ ಕೊರೊನಾ ಲಸಿಕೆ ಹಾಕಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಾ.ಮಕಾಂದರ್, ಕೃಷಿ ಸಚಿವರ ಮನೆಯಲ್ಲಿ ಹೆಚ್ಚು ಜನಕ್ಕೆ ಲಸಿಕೆ ಹಾಕಬಹುದೆಂಬ ಉದ್ದೇಶಕ್ಕಾಗಿ ಅವರ ಮನೆಗೆ ಆ್ಯಂಬುಲನ್ಸ್ ಸಮೇತ ಹೋಗಿದ್ದೆವು. ಬೇರೆ ಉದ್ದೇಶ ಇರಲಿಲ್ಲ. ಈ ರೀತಿ ಮನೆಗೆ ಹೋಗಿ ಹಾಕುವ ನಿಯಮ ಇಲ್ಲ. ಆದರೂ ಸಹ ತಾವು ನಿಯಮ ಉಲ್ಲಂಘಿಸಿ ಹೋಗಿರುವುದಾಗಿ ತಿಳಿಸಿದ್ದಾರೆ.