ರಾಣೆಬೆನ್ನೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಿ.ಸತೀಶ್ ಕುಮಾರ್ ಸರ್ವಾಧಿಕಾರ ನಡೆಸುತ್ತಿದ್ದಾರೆ ಎಂದು ಎಪಿಎಂಸಿ ಸದಸ್ಯರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಯಿತು.
ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಡಿ.ಸತೀಶ್ ಕುಮಾರ್ ಸದಸ್ಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಅಲ್ಲದೆ ಅಗೌರವದಿಂದ ಕಾಣುತ್ತಿದ್ದಾರೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಹೊರತುಪಡಿಸಿ ಸದಸ್ಯರ ಗಮನಕ್ಕೆ ತರದೆ ಕೆಲ ಆಸ್ತಿಗಳನ್ನು ಪರಭಾರೆ ಮಾಡಲು ಯತ್ನಿಸಿದ್ದಾರೆ. ಇದರ ಬಗ್ಗೆ ಸದಸ್ಯರು ವಿಚಾರಿಸಿದರೆ ಇದು ನನ್ನ ವ್ಯಾಪ್ತಿಗೆ ಬರುವಂತಹ ವಿಷಯವಾಗಿದೆ. ಇದನ್ನು ನಿಮಗೆ ಕೇಳಲು ಹಕ್ಕಿಲ್ಲವೆಂದು ಸರ್ಕಾರದ ಆಸ್ತಿಗೆ ಹಾನಿಯನ್ನುಂಟು ಮಾಡಲು ಯತ್ನಿಸಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಕಳಸದ ಆರೋಪಿಸಿದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಅಭಿವೃದ್ಧಿ ವಿಚಾರದಲ್ಲಿ ಸಹ ಕಾರ್ಯದರ್ಶಿಗಳು ಅಸಡ್ಡೆ ತೋರಿದ್ದು, ಗುತ್ತಿಗೆ ಪಡೆದವರಿಗೆ ಇಂದಿಗೂ ಒಪ್ಪಂದ ಪತ್ರಗಳನ್ನು ನೀಡಿಲ್ಲ. ಇದರಿಂದ ಮೆಗಾ ಮಾರುಕಟ್ಟೆ ಅಭಿವೃದ್ಧಿ ಕುಂಠಿತವಾಗುತ್ತಿದೆ.
ನಗರದ ಎಪಿಎಂಸಿಗೆ ಹೊರ ರಾಜ್ಯದಿಂದ ಬರುವ ಲಾರಿಗಳನ್ನು ತಡೆದು ಅವರಿಂದ ದಂಡದ ರೂಪದಲ್ಲಿ ಹಣ ವಸೂಲಿ ಮಾಡಿದ್ದಾರೆ. ಎಪಿಎಂಸಿಗೆ ಮೂಲಭೂತ ಸೌಕರ್ಯಗಳನ್ನು ಸಹ ಸರಿಯಾಗಿ ನೀಡದೆ, ಇಲ್ಲಿನ ವರ್ತಕರಿಗೆ ಸಹಕಾರ ನೀಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಎಪಿಎಂಸಿ ಸದಸ್ಯರು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.