ರಾಣೇಬೆನ್ನೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಸ್ಥಾನದ ಕನಸು ಗರಿಗೆದರಿದೆ.
ಒಟ್ಟು 35 ಸದಸ್ಯರ ಬಲ ಹೊಂದಿರುವ ನಗರಸಭೆಗೆ ಅಧ್ಯಕ್ಷ ಸ್ಥಾನ ಈ ಬಾರಿ ಹಿಂದುಳಿದ ಅ ವರ್ಗ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಬಿಜೆಪಿಯಲ್ಲಿ ಹಿಂದುಳಿದ ಅ (ಮಹಿಳಾ) ವರ್ಗಕ್ಕೆ ಸೇರಿದ 1ನೇ ವಾರ್ಡ್‌ನ ಸದಸ್ಯೆ ರೂಪಾ ಚಿನ್ನಿಕಟ್ಟಿ, 17ನೇ ವಾರ್ಡ್‌ನ ಕವಿತಾ ಹೆದ್ದೇರಿ, 22ನೇ ವಾರ್ಡ್‌ನ ಉಷಾ ಚಿನ್ನಿಕಟ್ಟಿ, 29ನೇ ವಾರ್ಡ್‌ನ ಹೊನ್ನವ್ವ ಕಾಟಿ, 15ನೇ ವಾರ್ಡ್‌ನ ರತ್ನವ್ವ ಪೂಜಾರ ಸೇರಿ ಐವರು ಮಹಿಳಾ ಸದಸ್ಯರಿದ್ದಾರೆ. ಕಾಂಗ್ರೆಸ್‌ನಲ್ಲಿ 3ನೇ ವಾರ್ಡ್‌ನ ಚಂಪಕ ಬಿಸಲಹಳ್ಳಿ, ಜಯಶ್ರೀ ಪಿಸೆ ಸೇರಿ ಇಬ್ಬರು ಹಾಗೂ ಕೆಪಿಜೆಪಿಯಲ್ಲಿ 14ನೇ ವಾರ್ಡ್‌ನ ಸದಸ್ಯೆ ಅರೀಫಾಖಾನಂ ಸೌದಾಗಾರ್‌ಗೆ ಅಧ್ಯಕ್ಷ ಸ್ಥಾನದ ಅವಕಾಶವಿದೆ.
ಇವರಲ್ಲಿ 29ನೇ ವಾರ್ಡಿನ ಹೊನ್ನವ್ವ ಕಾಟಿ ಹೆಸರು ಅಧ್ಯಕ್ಷ ಸ್ಥಾನಕ್ಕೆ ಜೋರಾಗಿ ಕೇಳಿ ಬರುತ್ತಿದೆ. ನಗರಸಭೆ ಚುನಾವಣೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 9, ಕೆಪಿಜೆಪಿಯಿಂದ 10 ಹಾಗೂ ಓರ್ವ ಪಕ್ಷೇತರ ಸದಸ್ಯು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೇರಲು 18 ಸದಸ್ಯರ ಬೆಂಬಲವಿರಬೇಕು. ಬಿಜೆಪಿ ಗದ್ದುಗೆ ಏರಲು ಇನ್ನೂ 3 ಸದಸ್ಯರ ಕೊರತೆ ಎದುರಾಗಿದೆ. ಹೀಗಾಗಿ ಕೆಪಿಜೆಪಿ ಅಥವಾ ಪಕ್ಷೇತರ ಸದಸ್ಯರಿಗೆ ಗಾಳ ಹಾಕುವುದು ಬಿಜೆಪಿಗೆ ಅನಿವಾರ್ಯ.
ಇನ್ನೂ ಕಾಂಗ್ರೆಸ್ ಹಾಗೂ ಕೆಪಿಜೆಪಿ ಎರಡೂ ಪಕ್ಷದವರು ತಲಾ 9 ಸದಸ್ಯರನ್ನು ಹೊಂದಿದ್ದಾರೆ. ಎರಡು ಪಕ್ಷದವರೂ ಹೊಂದಾಣಿಕೆ ಮಾಡಿಕೊಂಡರೆ ಪಕ್ಷೇತರ ಸದಸ್ಯರ ಅಗತ್ಯ ಕೂಡ ಇವರಿಗೆ ಬೀಳಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನವರು ಕೆಪಿಜೆಪಿ ಸದಸ್ಯರನ್ನ ಸೆಳೆಯಲು ಸರ್ಕಸ್ ನಡೆಸಿದ್ದಾರಂತೆ.