ಹಾವೇರಿ: ಜಿಲ್ಲೆಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರ ಮಾಡುತ್ತಿರುವ ತಪ್ಪಿಗೆ ತಕ್ಕ ಉತ್ತರ ನೀಡುವ ಸಮ್ಮೇಳನವಾಗಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಸೇರಿದಂತೆ ಇತರ ವಿವಿಧ ಸಮಿತಿಗಳನ್ನ ರಚನೆ ಬಳಿಕ ಮಾತನಾಡಿದ ಅವರು, ಸ್ವಾಗತ ಸಮಿತಿಯಲ್ಲಿ ಎಲ್ಲ ಪಕ್ಷದವರಿದ್ದು, ರಾಜಕೀಯೇತರ ಸಮ್ಮೇಳನವಾಗಬೇಕು. ಕನ್ನಡಿಗರು ಹೆಮ್ಮೆ ಪಡುವಂತಹ ಸಮ್ಮೇಳನ ಇದಾಗಬೇಕು ಎಂದರು.
ಕನ್ನಡದ ನೆಲ, ಜಲ, ಭಾಷೆ ವಿಚಾರ ಬಂದಾಗ ಕನ್ನಡಿಗರೆಲ್ಲ ಒಂದು ಎಂಬ ಭಾವನೆ ಬರುವ ರೀತಿ ಸಮ್ಮೇಳನ ನಡೆಯಬೇಕು. ಸಮ್ಮೇಳನದ ಸಿದ್ದತೆಯನ್ನ ಎರಡು ಹಂತದಲ್ಲಿ ಮಾಡಲಾಗುತ್ತಿದೆ.
- ವಸತಿ, ಊಟ, ಸಾರಿಗೆ ವೇದಿಕೆ ಸಿದ್ದತೆಯನ್ನ ಸರ್ಕಾರ ಮಾಡಲಿದೆ.
- ಸಮ್ಮೇಳನದ ಆತಿಥ್ಯ, ಸನ್ಮಾನ ಮತ್ತು ಮೆರವಣಿಗೆಯನ್ನ ಕಸಾಪ ನೋಡಿಕೊಳ್ಳಲಿದೆ.
ಕಸಾಪ ಕಾರ್ಯದಲ್ಲಿ ನಾವು, ನಮ್ಮ ಕಾರ್ಯದಲ್ಲಿ ಕಸಾಪ ಮಧ್ಯ ಪ್ರವೇಶಿಸುವುದಿಲ್ಲ. ಸಮ್ಮೇಳನದ ಎಲ್ಲ ಸಮಿತಿಗಳು 10 ದಿನದೊಳಗಾಗಿ ಪೂರ್ಣ ರಚಿತಗೊಂಡು ಯುದ್ದೋಪಾದಿಯಲ್ಲಿ ಕೆಲಸ ಆರಂಭಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ವಿಶೇಷ ಆ್ಯಪ್ ರಚನೆ: ಬಳಿಕ ಮಾತನಾಡಿದ ಕ.ಸಾ.ಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಸಮ್ಮೇಳನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಆ್ಯಪ್ ರಚಿಸಲಾಗಿದೆ. ಪ್ರತಿನಿಧಿಗಳ ನೋಂದಣಿ ಈ ಆ್ಯಪ್ನಲ್ಲಿ ಮಾಡಬಹುದು. ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳು ಪರಿಷತ್ ಸದಸ್ಯರಾಗಿರಬೇಕು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಜನಪ್ರತಿನಿಧಿಯಾಗಿ ಪಾಲ್ಗೊಳ್ಳುವ ಇಚ್ಛೆ ಇದ್ದವರು ಈ ಕೂಡಲೇ ಪರಿಷತ್ ಸದಸ್ಯರಾಗಲು ಮುಂದಾಗಬೇಕು. ಈ ಆ್ಯಪ್ ಅನ್ನು ಡಿ.1ರಂದು ಪರಿಷತ್ ಅನಾವರಣಗೊಳಿಸುತ್ತದೆ. ಡಿ.18 ರವರೆಗೆ ಆ್ಯಪ್ ತೆರೆದಿರುತ್ತದೆ. 20 ಸಾವಿರ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಮಂತ್ರಣ ಪತ್ರಿಕೆಗಳನ್ನ ವಾಟ್ಸ್ಆ್ಯಪ್ ಇ - ಮೇಲ್ ಮೂಲಕ ಕನ್ನಡಿಗರಿಗೆ ರಿಗೆ ತಲುಪಿಸಲಾಗುವುದು ಎಂದು ಅವರು ತಿಳಿಸಿದರು
ಇದೇ ವೇಳೆ, ಮಹೇಶ್ ಜೋಶಿ ಮತ್ತು ಅಧಿಕಾರಿಗಳ ಜತೆ ಸಚಿವ ಶಿವರಾಮ ಹೆಬ್ಬಾರ್ ಸಮ್ಮೇಳನ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ, ಲಾಂಛನದಲ್ಲಿ ಸ್ವಲ್ಪ ಮಾರ್ಪಾಡು: ಮಹೇಶ್ ಜೋಷಿ