ಹಾವೇರಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖಾ ವರದಿ ಬಂದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬೆಳಗ್ಗೆ ಸಿಎಂ ಬೊಮ್ಮಾಯಿ ತಿಳಿಸಿದ್ದರು. ಈಗಾಗಲೇ ಮುಖ್ಯಮಂತ್ರಿಗಳು ಸಚಿವ ಈಶ್ವರಪ್ಪ ಅವರನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕರೆಲ್ಲ ಸೇರಿಕೊಂಡು ಹೈಕಮಾಂಡ್ ನಿರ್ದೇಶನದ ಮೇಲೆ ತಾರ್ಕಿಕ ಅಂತ್ಯ ಕಾಣಿಸಲಿದ್ದಾರೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ಮೇಲೆ ಆರೋಪಗಳು ಕೇಳಿ ಬಂದಿರುವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಪಕ್ಷ ನಿರ್ದಿಷ್ಟ ನಿರ್ಣಯವನ್ನು ಇಂದು ಅಥವಾ ನಾಳೆ ಕೈಗೊಳ್ಳಲಿದೆ ಎಂದು ಹೆಬ್ಬಾರ್ ತಿಳಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರ ಆರಂಭಿಸಿದ್ದೇ ಕಾಂಗ್ರೆಸ್, ಅವರಿಗೆ ಧರಣಿ ಮಾಡುವ ನೈತಿಕತೆ ಇಲ್ಲ: ಸಿಎಂ
ಬಸವರಾಜ ಬೊಮ್ಮಾಯಿ ಓರ್ವ ಅಸಮರ್ಥ ಸಿಎಂ ಎಂಬ ಕೋಳಿವಾಡ ಆರೋಪಕ್ಕೆ ಪ್ರತಿಕ್ರಿಯಿಸಿ, ಕೋಳಿವಾಡ ಸ್ಪೀಕರ್ ಆಗಿದ್ದವರು. ಅವರ ಕುರಿತಂತೆ ಮಾತನಾಡಲು ಹೋದರೆ ಗಂಟೆಗಟ್ಟಲೆ ಪುರಾಣ ಆಗುತ್ತದೆ ಎಂದು ವ್ಯಂಗ್ಯವಾಡಿದರು. ಮಾಜಿ ಸ್ಪೀಕರ್ ಕೋಳಿವಾಡಗೆ ದೇವರು ಒಳ್ಳೆಯದು ಮಾಡಲಿ ಎಂದರು.