ಹಾವೇರಿ: ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಕ್ಷೇತ್ರದ ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಹಿರೇಕೆರೂರು ಕ್ಷೇತ್ರದ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅವರ ಖರ್ಚು ಭರಿಸುವುದಾಗಿ ಅಭಯ ನೀಡಿದ್ದಾರೆ.
ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಆಸ್ಪತ್ರೆ ಬಿಲ್, ಬಿಪಿಎಲ್ ಕಾರ್ಡ್ ಹಾಗೂ ಗುರುತಿನ ಚೀಟಿ ನೀಡಿದರೆ ಅವರ ಖರ್ಚು ಭರಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಯನ್ನ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಬಿಪಿಎಲ್ ಕಾರ್ಡ್ದಾರರಿಗೆ ಸಹಾಯ ಮಾಡುವ ಇಂಗಿತವನ್ನ ಬಿ.ಸಿ ಪಾಟೀಲ್ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ತಮ್ಮ ಸಹಾಯಕರನ್ನ ಭೇಟಿಯಾಗುವಂತೆ ಹೇಳಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ಆರ್ಥಿಕತೆ ಇರುವುದಿಲ್ಲ. ಒಂದು ವೇಳೆ ಬಿಪಿಎಲ್ ಕಾರ್ಡ್ ಹೊಂದಿರುವವರು ಕೊರೊನಾ ಚಿಕಿತ್ಸೆ ಪಡೆದರೆ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಸಹ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಆದರೂ ಸಹ ಬಡವರು ಸೂಕ್ತ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ತಾವು ಈ ಸಹಾಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.