ಹಾವೇರಿ: ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ ಅಂದ್ರು. ಅವರನ್ನೆ ಕರೆದುಕೊಂಡು ಬಂದು ಸಿಎಂ ಸ್ಥಾನದಲ್ಲಿ ಕೂರಿಸೋ ಹಣೆಬರಹ ಸಿದ್ದರಾಮಯ್ಯಗೆ ಬಂತು. ಯಡಿಯೂರಪ್ಪ ಸಿಎಂ ಆಗೋದಿಲ್ಲ ಅಂದ್ರು. ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಅರಳೀಕಟ್ಟಿ ಗ್ರಾಮದಲ್ಲಿ ಮಾತನಾಡಿರುವ ಅವರು, ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸೋಲುತ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಬಿ.ಸಿ.ಪಾಟೀಲ್ ಮೂವತ್ತರಿಂದ ಮೂವತ್ತೈದು ಸಾವಿರ ಲೀಡ್ನಲ್ಲಿ ಗೆಲ್ಲುತ್ತಾರೆ, ಬೇಕಾದ್ರೆ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.
ನೀವು ಎಂಎಲ್ಎ ಅಥವಾ ಯಡಿಯೂರಪ್ಪಗೆ ವೋಟು ಕೊಡುತ್ತಿಲ್ಲ. ಮಂತ್ರಿಗೆ ವೋಟು ಕೊಡುತ್ತಿದ್ದೀರ. ವೋಟು ಕೊಟ್ಟ ಮರುದಿನವೇ ಬಿ.ಸಿ.ಪಾಟೀಲ್ ಮಂತ್ರಿಯಾಗುತ್ತಾರೆ ಎಂದು ಭರವಸೆ ನೀಡಿದರು. ಜೊತೆಗೆ ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಇಷ್ಟು ದಿನ ಕುಮಾರಸ್ವಾಮಿ, ಸಿದ್ದರಾಮಯ್ಯ ಅನ್ನೋ ಗೊಂದಲ ನೋಡಿದ್ದೀರಿ. ಈಗ ಕಾಂಗ್ರೆಸ್‌ನವರು ಒಂದಾಗಿದ್ದೇವೆ ಅಂತಿದ್ದಾರೆ. ಈಗ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರೋದು ಸಿದ್ದರಾಮಯ್ಯ ಒಬ್ಬರೇ ಎಂದಿದ್ದಾರೆ
ಜೆಡಿಎಸ್ನಿಂದ ಮೂಲೆ ಸೇರಿದ್ದ ಸಿದ್ದರಾಮಯ್ಯರನ್ನ ಕಾಂಗ್ರೆಸ್‌ಗೆ ಕರೆತಂದವರು ವಿಶ್ವನಾಥ‌್. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್ನಿಂದ ವಿಶ್ವನಾಥ್ ಅವರನ್ನು ಹೊರಹಾಕಿದರು. ಈ ರೀತಿ ಮೋಸ ಮಾಡೋದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.