ಹಾವೇರಿ: ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಮನೆಯಲ್ಲಿ ಗುರುವಾರ ಶಿವಗಣಾರಾಧನೆ ನಡೆಸಲಾಯಿತು.
ನಮಗೆ ಶಿವಗಣಾರಾಧನೆ ಮಾಡಲು ಇಷ್ಟವಿರಲಿಲ್ಲ. ಆದರೆ ವೀರಶೈವ ಸಂಪ್ರದಾಯ ಪ್ರಕಾರ ವ್ಯಕ್ತಿ ಮೃತನಾದ ನಂತರ 3 ದಿನದಿಂದ 9 ದಿನದೊಳಗೆ ಶಿವಗಣಾರಾಧನೆ ಆಚರಿಸಬೇಕು. ಅದರಂತೆ ಗುರುವಾರ ನಮ್ಮ ಮನೆಯಲ್ಲಿ ಶಿವಗಣಾರಾಧನೆ ಮಾಡಿದ್ದೇವೆ ಎಂದು ಎಂದು ಮೃತ ನವೀನ್ ಸಹೋದರ ಹರ್ಷ ತಿಳಿಸಿದರು.
ಮೂರು ದಿನದೊಳಗೆ ನವೀನ್ ಪಾರ್ಥಿವ ಶರೀರ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಅದಕ್ಕಾಗಿ ಸಂಬಂಧಿಕರು, ಗ್ರಾಮಸ್ಥರು ಕಾಯುತ್ತಿದ್ದರು. ಆದರೆ ಪಾರ್ಥಿವ ಶರೀರ ಬರುವ ಕುರಿತು ಖಚಿತ ಮಾಹಿತಿ ಸಿಗದ ಕಾರಣ ಗುರುವಾರ ಶಿವಗಣಾರಾಧನೆ ಮಾಡಲಾಯಿತು ಎಂದು ಅವರು ತಿಳಿಸಿದರು.
ನವೀನ್ ಮನೆಯ ಭಿನ್ನಕ್ಕೆ ಬರುತ್ತಿದ್ದ ಸ್ವಾಮೀಜಿಗಳನ್ನು ಕರೆಸಿ ಪೂಜೆ ನಡೆಸಲಾಯಿತು. ನವೀನ್ ಭಾವಚಿತ್ರ ನೋಡುತ್ತಿದ್ದಂತೆ ಪೋಷಕರು, ಸಂಬಂಧಿಕರು ಭಾವುಕರಾದರು.
ಈ ಮಧ್ಯೆ ಗುರುವಾರ ರಾಣೆಬೆನ್ನೂರು ತಹಶೀಲ್ದಾರ್ ಶಂಕರ್, ಮಾಜಿ ಸಚಿವ ಆರ್.ಶಂಕರ್ ಅವರು ನವೀನ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಜತೆಗೆ ಆರೋಗ್ಯ ಇಲಾಖೆಯಿಂದ ನವೀನ್ ಪೋಷಕರ ಆರೋಗ್ಯ ತಪಾಸಣೆ ನಡೆಸಲಾಯಿತು.
ನಂತರ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಭೇಟಿ ನೀಡಿದರು. ನವೀನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೃತನ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ನವೀನ್ ತಂದೆ ಶೇಖರಗೌಡ, ನಮ್ಮ ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರೆದಿದೆ. ಚಂದ್ರನ ಮೇಲಿನ ಲಕ್ಷಣಗಳನ್ನು ನಾವು ತಿಳಿಯುತ್ತಿದ್ದೇವೆ. ಅಧಿಕಾರಿಗಳು, ಮಠಾಧೀಶರು, ಸರ್ಕಾರ ತಮ್ಮ ಜತೆ ಇದೆ ಎನ್ನುತ್ತಿದ್ದಾರೆ. ಆದರೆ ನಮ್ಮ ಮಗನ ಪಾರ್ಥಿವ ಶರೀರ ಎಲ್ಲಿದೆ?, ಯಾವಾಗ ಬರುತ್ತದೆ ಎಂಬ ಮಾಹಿತಿ ತಿಳಿಯುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪುತ್ರ ಶೋಕಂ ನಿರಂತರಂ.. ಅಗಲಿದ ಮಗನ ನೆನೆದು ಹೆತ್ತ ಕರುಳಿನ ಆಕ್ರಂದನ