ಹಾವೇರಿ/ಕಲಬುರಗಿ: ರಾಜ್ಯ ಚುನಾವಣೆಗೆ ಮತದಾನದ ದಿನ ಸಮೀಪಿಸುತ್ತಿರುವ ನಡುವೆ ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಅವರ ಮನೆಯ ಮೇಲೆ ಇಂದು ದಾಳಿ ನಡೆಸಲಾಗಿದೆ. ಮುಂಜಾನೆಯೇ ಕಾರ್ಯಾಚರಣೆ ನಡೆಸಿರುವ ತೆರಿಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಡಗಿ ಪಟ್ಟಣದ ವಿದ್ಯಾ ನಗರದ ನಿವಾಸದ ಮೇಲೆ ದಾಳಿ ನಡೆದಿದೆ. ಚನ್ನಬಸಪ್ಪ ಹುಲ್ಲತ್ತಿ ಈ ಹಿಂದೆ ಎಪಿಎಂಸಿ ಸಮಿತಿ ಅಧ್ಯಕ್ಷರಾಗಿದ್ದರು.
ಪರಿಶೀಲನೆ ವೇಳೆ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ ಎನ್ನಲಾಗಿದೆ. ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರ ನಿವಾಸವಿದೆ.
ಚಿತ್ತಾಪುರ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮನೆ ಮೇಲೆಯೂ ಐಟಿ ದಾಳಿ ಆಗಿದೆ. ಜಿ.ಪಂ ಮಾಜಿ ಸದಸ್ಯ ಅರವಿಂದ್ ಚೌಹಾಣ್ ನಿವಾಸಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ. ಬಿಜೆಪಿ ಟಿಕೆಟ್ ವಂಚಿತನಾಗಿ ಕಾಂಗ್ರೆಸ್ ಸೇರಿದ್ದ ಚೌಹಾಣ್ ಅವರ ಮನೆ, ಹೋಟೆಲ್ ಹಾಗೂ ಸ್ಟೋನ್ ಕ್ರಷರ್ ಮೇಲೆ ಶೋಧ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಿನ್ನೆ(ಶನಿವಾರ) ಕಾಂಗ್ರೆಸ್ ಶಾಸಕಿ ಕನ್ನಿಜ್ ಫಾತಿಮಾ ಬೆಂಬಲಿಗರಿಬ್ಬರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಐಟಿ ದಾಳಿ, ಅಧಿಕಾರಿಗಳು ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ: ಶಿವಲೀಲಾ ಆರೋಪ