ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗಲಾರಂಭಿಸಿದೆ. ಆರಂಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಕಾಣಿಸಿಕೊಂಡ ಕೊರೊನಾ ಇದೀಗ ಪಟ್ಟಣ, ಗ್ರಾಮಗಳಿಗೆ ವಕ್ಕರಿಸಲಾರಂಭಿಸಿದೆ. ಶಿಗ್ಗಾಂವಿ, ರಟ್ಟಿಹಳ್ಳಿ ಮತ್ತು ಗುತ್ತಲಗಳಲ್ಲಿ ಸಾರ್ವಜನಿಕರು ಸ್ವಯಂ ಲಾಕ್ಡೌನ್ ಘೋಷಿಸಿಕೊಂಡಿದ್ದಾರೆ. ಕೇವಲ ಆರು ಗಂಟೆಗಳ ಕಾಲ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು, ಉಳಿದಂತೆ ಲಾಕ್ಡೌನ್ ಮಾಡಲಾಗುತ್ತಿದೆ. ಈ ಮೂಲಕ ತಮ್ಮ ರಕ್ಷಣೆಗೆ ಸಾರ್ವಜನಿಕರೇ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಸವಣೂರು ನಗರದಲ್ಲಿ. ನಂತರ ಶಿಗ್ಗಾಂವಿ, ರಾಣೆಬೆನ್ನೂರು ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ವ್ಯಾಪಿಸಿದೆ. ಲಾಕ್ಡೌನ್ ಸಡಿಲಿಕೆಯವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಆರಂಭವಾದ ಪಾಸಿಟಿವ್ ಪ್ರಕರಣಗಳು ಇದೀಗ 288ಕ್ಕೆ ಏರಿಕೆಯಾಗಿವೆ.
ಸ್ವಯಂ ಲಾಕ್ಡೌನ್ ಘೋಷಿಸಿಕೊಂಡಿರುವ ಗ್ರಾಮಗಳಲ್ಲಿ ನಾಗರಿಕರು ಮನೆಯಿಂದ ಹೊರಗೆ ಬರುವುದಿಲ್ಲ. ತೀರಾ ಅಗತ್ಯ ವಸ್ತುಗಳು ಬೇಕಾದವರು ಮಾಸ್ಕ್ ಧರಿಸಿ ಮನೆಯಿಂದ ಹೊರ ಬರುತ್ತಾರೆ. ಅದು ಸಾಮಾಜಿಕ ಅಂತರದಲ್ಲಿ ನಿಂತು ತಮಗೆ ಬೇಕಾದ ಅವಶ್ಯಕವಾಗಿರುವ ವಸ್ತು ಖರೀದಿಸಿ ಮನೆಗೆ ತೆರಳುತ್ತಾರೆ. ಉಳಿದ ಅವಧಿಯಲ್ಲಿ ನಾಗರಿಕರು ಕೊರೊನಾ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಕೈಗಳನ್ನು ಪದೇ ಪದೆ ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ.