ಹಾವೇರಿ: ರಾಜ್ಯದಲ್ಲಿ ಲಾಕ್ಡೌನ್ ಆದೇಶ ಜಾರಿಯಾದ ಬಳಿಕ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ ದಂಧೆ ವರದಿಯಾಗುತ್ತಿದೆ. ಇದೀಗ ಹಾವೇರಿಯಲ್ಲಿ ಕಳೆದ ತಿಂಗಳ 24ರಿಂದ ಈವರೆಗೆ ಒಟ್ಟು 477 ಬಾರಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಲಾಗಿದೆ.
ಅದರಲ್ಲಿ 324 ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹಾವೇರಿ ಅಬಕಾರಿ ಡಿಸಿ ಡಾ.ಮಹಾದೇವಿಬಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ 31 ಪ್ರಕರಣಗಳನ್ನು ದಾಖಲಿಸಿದ್ದು 18 ಜನ ಆರೋಪಿಗಳನ್ನ ಬಂಧಿಸಿರುವುದಾಗಿ ತಿಳಿಸಿದರು.
ದಾಳಿ ವೇಳೆ 122.250 ಲೀಟಲ್ ಮದ್ಯ ಹಾಗೂ 36.300 ಲೀಟರ್ ಬೀರ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು. ಕೊರೊನಾ ಹರಡದಂತೆ ಸರ್ಕಾರ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಮಹಾದೇವಿಬಾಯಿ ತಿಳಿಸಿದರು.