ಹಾವೇರಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳ ಜೊತೆಗೆ 1.41 ಲಕ್ಷ ರೂ. ಮೌಲ್ಯದ 235 ಚೀಲ ಅಕ್ಕಿ, 1 ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ರಾಣೆಬೆನ್ನೂರ ತಾಲೂಕಿನ ಡಿಯೋಲ್ ಡಾಬಾ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಾಂಧಿನಗರದ ನಿವಾಸಿಯಾಗಿರುವ ಲಾರಿ ಚಾಲಕ ಜಿ.ಕೆ.ಶಿವರಾಜ್ ಹಾಗೂ ಕ್ಲೀನರ್ ಮಾರುತಿ ಸಂಜೀವಪ್ಪ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ನಗರದ ಗುರಣ್ಣ ಶೇಖಪ್ಪ ಉಪ್ಪಿನ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಲಾರಿಯಲ್ಲಿ ಪಡಿತರ ಅಕ್ಕಿ ಚೀಲಗಳನ್ನು ತುಂಬಿಕೊಂಡು ಅಕ್ರಮವಾಗಿ ತುಮಕೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ಲಾರಿ ತಡೆದು ವಿಚಾರಿಸಿದ್ದಾರೆ. ಆಗ ಲಾರಿ ಚಾಲಕ ಶಿವರಾಜ್, ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆಂದು ತಿಳಿಸಿದ್ದಾನೆ. ಆದ್ರೆ ಆ ಬಗ್ಗೆ ಯಾವುದೇ ದಾಖಲೆ ಇಲ್ಲದ ಕಾರಣ ಇಬ್ಬರು ಆರೋಪಿಗಳ ಜೊತೆಗೆ ಅಕ್ಕಿ ಚೀಲಗಳು ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.