ರಾಣೆಬೆನ್ನೂರು: ಪರಿಶಿಷ್ಟರ ಕಾಲೋನಿಗಳಿಗೆ ಅಳವಡಿಸಬೇಕಾದ ಹೈ ಮಾಸ್ಕ್ ದೀಪಗಳನ್ನು ಸವರ್ಣಿಯರ ಕಾಲೋನಿಗಳಿಗೆ ಅಳವಡಿಸುವ ಮೂಲಕ ಅಧಿಕಾರಿಗಳು ಪರಿಶಿಷ್ಟರ ಅನುದಾನವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಸುಮಾರು 20 ಹಳ್ಳಿಗಳಿಗೆ 2019-20 ನೇ ಸಾಲಿನ ಪರಿಶಿಷ್ಟ ಜಾತಿ ಅಭಿವೃದ್ಧಿ ಅಡಿ ಪರಿಶಿಷ್ಟರು ಹೆಚ್ಚಾಗಿರುವ ಕಾಲೋನಿಗಳಿಗೆ 1 ಕೋಟಿ ರೂ. ಅನುದಾನಲ್ಲಿ ಹೈ ಮಾಸ್ಕ್ ಹಾಕಲು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಆಯ್ಕೆ ಸಮಿತಿಯಿಂದ ತೀರ್ಮಾನಿಸಲಾಗಿತ್ತು.
ಜ.29 ರಂದು ಆಯ್ಕೆ ಸಮಿತಿಯಲ್ಲಿ ರಾಣೆಬೆನ್ನೂರು ರಾಹುತನಕಟ್ಟಿ, ನದಿಹರಳಹಳ್ಳಿ, ಕವಲೇತ್ತು, ಚಳಗೇರಿ, ಇಟಗಿ ಸೇರಿದಂತೆ ಸುಮಾರು 20 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ಗ್ರಾಮದ ಪರಿಶಿಷ್ಟರು ವಾಸಿಸುವ ಕಾಲೋನಿಗಳಿಗೆ ಸುಮಾರು ಐದು ಲಕ್ಷ ವೆಚ್ಚದ ಹೈಮಾಸ್ಕ್ ದೀಪ ಅಳವಡಿಸಲು ಸಮಾಜ ಕಲ್ಯಾಣ ಇಲಾಖೆ ಅನುಮೋದನೆ ನೀಡಲಾಗಿದೆ. ಆದರೆ, ಅಧಿಕಾರಿಗಳ ಪ್ರಭಾವ ಬೀರಿ ಪರಿಶಿಷ್ಟ ಕಾಲೋನಿಗಳಿಗೆ ಹಾಕಬೇಕಾದ ಹೈ ಮಾಸ್ಕ್ ದೀಪಗಳನ್ನು ಸವರ್ಣಿಯರ ಕಾಲೋನಿಗಳಿಗೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಅಲ್ಲದೆ, ಪರಿಶಿಷ್ಟ ಜನರು ಇದರ ಬಗ್ಗೆ ಅಧಿಕಾರಿಗಳಿಗೆ ಸಹ ದೂರ ನೀಡಿದ್ದಾರೆ. ಈ ದೂರಿನ ಹಿನ್ನೆಲೆ ರಾಣೆಬೆನ್ನೂರು ನಗರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ವತಃ ರಾಹುತನಕಟ್ಟಿ, ಚಳಗೇರಿ, ನದಿಹರಳಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಪರಿಶಿಷ್ಟ ಕಾಲೋನಿಗಳನ್ನು ಬಿಟ್ಟು ಸವರ್ಣಿಯರ ಕಾಲೋನಿಗಳಿಗೆ ಹೈ ಮಾಸ್ಕ್ ಹಾಕಿರುವುದು ಬೆಳಕಿಗೆ ಬಂದಿದೆ. ಕೂಡಲೇ ದುರ್ಬಳಕೆಯ ಬಗ್ಗೆ ಸಹಾಯಕ ನಿರ್ದೇಶಕರು ಹಾವೇರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪರಿಶಿಷ್ಟರ ಅನುದಾನ ದುರ್ಬಳಕೆ ಮಾಡಿಕೊಂಡರು ಯಾರು? ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ 20 ಗ್ರಾಮದ ಪರಿಶಿಷ್ಟರ ಕಾಲೋನಿಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಕೆಲ ಪ್ರಭಾವಿಗಳು ರಾಜಕೀಯ ಒತ್ತಡ ಮೂಲಕ ಅಧಿಕಾರಿಗಳಿಗೆ ಹೆದರಿಸಿ ತಮಗೆ ಬೇಕಾದ ಕಡೆ ದೀಪಗಳನ್ನು ಹಾಕಿಸಿಕೊಂಡಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ದಲಿತ ಮುಖಂಡ ಹನುಮಂತ ಕಬ್ಬಾರ ಎಚ್ಚರಿಕೆ ನೀಡಿದ್ದಾರೆ.