ಹಾವೇರಿ: ಅಭಿವೃದ್ಧಿ ಕಾಣಲೆಂದು ಹತ್ತು ಹಲವು ಯೋಜನೆಗಳನ್ನು, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದ್ರೆ ಆ ಕಾಮಗಾರಿ ಅವೈಜ್ಞಾನಿಕವಾಗಿದ್ರೆ ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಜಿಲ್ಲೆಯಲ್ಲಿಯೂ ಕೂಡಾ ರಾಜ್ಯ ಹೆದ್ದಾರಿ ಸೇತುವೆಯ ಅವೈಜ್ಞಾನಿಕ ಕಾಮಗಾರಿಯಿಂದ ನೂರಾರು ರೈತರ ಬೆಳೆ ನೀರುಪಾಲಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ ಹೊರವಲಯದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತಿದೆ. ಬೈಪಾಸ್ ರಸ್ತೆಯಲ್ಲಿ ಕೆರೆಯ ಕಾಲುವೆ ಬರುವ ಕಾರಣ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕೆರೆ ಕಾಲುವೆಯ ಕಟ್ಟೆಯನ್ನು ಒಡೆಯಲಾಗಿದೆ. ಪರಿಣಾಮ ಕೆರೆಗೆ ಸೇರಬೇಕಾದ ನೀರು ರೈತರ ಜಮೀನಿಗೆ ಹರಿದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಈ ಹಿನ್ನೆಲೆ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯೇ ಕಾರಣವೆಂದು ರೈತರು ಆರೋಪಿಸಿದ್ದು, ತಮಗಾದ ಹಾನಿಯನ್ನು ಕೆಆರ್ಡಿಸಿಎಲ್ ಪರಿಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೆರೆ ಕಾಲುವೆಯ ಕಟ್ಟೆ ಒಡೆದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನೀರು ಜಮೀನುಗಳಿಗೆ ನುಗ್ಗಿ ಭತ್ತ, ಹತ್ತಿ, ಕಬ್ಬು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಯಾದರೂ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೇ, ಕೆರೆ ಕಾಲುವೆ ಕಟ್ಟೆ ಒಡೆದ ಪರಿಣಾಮ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಒಡೆದಿದ್ದ ಕಾಲುವೆ ಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ ಎಂದು ರೈತರು ತಿಳಿಸಿದರು.