ಹಾವೇರಿ: ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಮಲ್ಲಯ್ಯ ಹಿರೇಮಠ ಎಂಬುವರು ತಮ್ಮ ನೆಚ್ಚಿನ ಹೋರಿ ಬ್ರಹ್ಮಾಂಡನ ಬರ್ತ್ ಡೇಯನ್ನು ವಿಶೇಷವಾಗಿ ಆಚರಿಸಿದ್ದಾರೆ.
ಮಲ್ಲಯ್ಯ ತಮಿಳುನಾಡಿನಿಂದ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ನಾಲ್ಕು ವರ್ಷಗಳ ಹಿಂದೆ ಈ ಹೋರಿಯನ್ನು ತಂದಿದ್ದರು. ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ನಡೆದ ಹೋರಿ ಹಬ್ಬಗಳಲ್ಲಿ ಬ್ರಹ್ಮಾಂಡ ಯಾರ ಕೈಗೂ ಸಿಗದಂತೆ ಮಿಂಚಿನಂತೆ ಓಡಿ 50ಕ್ಕೂ ಅಧಿಕ ಬಹುಮಾನ ಗೆದ್ದಿದ್ದಾನೆ. ಹೋರಿ ತಂದು ಶನಿವಾರಕ್ಕೆ ನಾಲ್ಕು ವರ್ಷವಾಗಿದ್ದು 15 ಕೆಜಿ ತೂಕದ ಕೇಕ್ ಕತ್ತರಿಸಿ, ಜನ್ಮದಿನಾಚರಣೆ ಮಾಡಲಾಯಿತು.
ಮಲ್ಲಯ್ಯ ಹಿರೇಮಠಗೆ ಜಮೀನು ಇಲ್ಲ. ಹೀಗಿದ್ದರೂ ಹೋರಿ ಮೇಲಿನ ಅಭಿಮಾನದಿಂದ ಮಗನಂತೆ ಸಾಕಿದ್ದಾರೆ. ಬರ್ತ್ ಡೇ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿ, ಹೋರಿ ಅಭಿಮಾನಿಗಳು ಗ್ರಾಮದ ಬೀದಿಗಳಲ್ಲಿ ಬ್ರಹ್ಮಾಂಡನನ್ನು ಮೆರವಣಿಗೆ ಮಾಡಿದರು.