ಹಾವೇರಿ: ಖಾಯಂ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲವಿರುವ ಕಾರಣ ಹಾವೇರಿ ನಗರಸಭೆಯ 21 ಕಸ ವಿಲೇವಾರಿ ವಾಹನ ಚಾಲಕರು ಕಳೆದ 20 ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಜಿಲ್ಲೆಯ ಪ್ರಮುಖ ಪ್ರದೇಶಗಳಲ್ಲಿ ಬರೀ ಕಸದ ರಾಶಿಗಳೇ ಕಂಡುಬರುತ್ತಿವೆ.
ಈ ಬಗ್ಗೆ ಪೌರಾಯುಕ್ತ ಬಸವರಾಜ್ ಜಿಡ್ಡಿ ಅವರನ್ನ ಕೇಳಿದ್ರೆ, ನಗರಸಭೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚುಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ ಚಾಲಕರನ್ನ ಮಾತ್ರ ಖಾಯಂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ 21 ಗುತ್ತಿಗೆ ನೌಕರರು 2 ವರ್ಷ ಪೂರೈಸದಿರುವ ಹಿನ್ನೆಲೆಯಲ್ಲಿ, ನೇಮಕಾತಿ ಮಾಡಲಾಗುತ್ತಿಲ್ಲ. ಅವರ ಮನವೊಲೈಸುವ ಕಾರ್ಯ ನಡೆಯುತ್ತಿದೆ ಎಂದರು.
ಹಾವೇರಿ ನಗರಸಭೆಯಲ್ಲಿ 31 ವಾರ್ಡ್‌ಗಳಿವೆ. ಈ 31 ವಾರ್ಡ್ಗಳಿಗೆ ಪ್ರತ್ಯೇಕವಾದ ಕಸದ ವಾಹನಗಳಿವೆ. ಈ ಎಲ್ಲಾ ವಾಹನಗಳು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ, ಕಸ ವಿಲೇವಾರಿ ಮಾಡುತ್ತಿದ್ದವು. ಆದರೆ, ಕಳೆದ 20 ದಿನಗಳಿಂದ ಕಸ ವಿಲೇವಾರಿ ವಾಹನ ಬಾರದ ಕಾರಣ, ಜನರು ಮನೆಯಲ್ಲಿರುವ ಕಸವನ್ನ ತಂದು ಸಾರ್ವಜನಿಕ ಕಸ ಸಂಗ್ರಾಹಾಲಯದ ಮುಂದೆ ರಾಶಿ ಹಾಕುತ್ತಿದ್ದಾರೆ.