ಹಾವೇರಿ: ಉತ್ತರ ಕರ್ನಾಟಕದ ಜಾನಪದ ಆಚರಣೆಗಳಲ್ಲಿ ಕಾರ ಹುಣ್ಣಿಮೆಯೂ ಒಂದು. ಈ ಹುಣ್ಣಿಮೆ ಆಚರಣೆಗೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಕರ್ಜಗಿಯಲ್ಲಿ ಕಾರ ಹುಣ್ಣಿಮೆ ಹಬ್ಬಕ್ಕೆ ಗುರುವಾರ ತೆರೆಬಿದ್ದಿದೆ.
ಬಂಡಿ ಓಟ ನೋಡಲು ಹರಿದುಬಂದ ಜನಸಾಗರಕರ್ಜಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಮೊದಲ ದಿನ ಹೊನ್ನುಗ್ಗಿಯಲ್ಲಿ ಅನ್ನದಾತರು ರಾಸುಗಳ ಕಾಲಿಗೆ ಬಂಗಾರ ಮುಟ್ಟಿಸುವ ಮೂಲಕ ಉತ್ತಮ ಮಳೆ ಬೆಳೆ ಬರಲಿ ಎಂದು ಬೇಡಿಕೊಂಡರು. ಎರಡನೇಯ ದಿನ ದೊಡ್ಡಬಂಡಿ ಕಾರ್ಯಕ್ರಮದಲ್ಲಿ ಎರಡು ಬಂಡಿಗಳಲ್ಲಿ ತಲಾ ಏಳು ವೀರಗಾರರು ಹತ್ತಿ ಬಂಡಿ ಓಡಿಸುವ ಮೂಲಕ ಗಮನ ಸೆಳೆದರು. ವೀರಗಾರರ ವೇಷಭೂಷಣ ಮತ್ತು ಬಂಡಿ ಓಡಿಸುವ ಗತ್ತು ಜನರ ಗಮನ ಸೆಳೆಯಿತು. ಕಾರ ಹುಣ್ಣಿಮೆಯನ್ನ ಗ್ರಾಮದಲ್ಲಿ ಶತಮಾನಗಳಿಂದ ಹಬ್ಬದಂತೆ ಆಚರಿಸಲಾಗುತ್ತದೆ. ಸ್ಥಳೀಯವಾಗಿ ಬ್ರಹ್ಮಲಿಂಗೇಶ್ವರನ ಜಾತ್ರಾ ಮಹೋತ್ಸವ ಎಂದೇ ಕರೆಯಲಾಗುತ್ತೆ.
ಮೂರನೇಯ ದಿನವಾಗಿದ್ದ ಗುರುವಾರ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿ ಕರಕ್ಕಿ ಬಂಡಿ ಓಡಿಸಲಾಯಿತು. ಕಾರ ಹುಣ್ಣಿಮೆ ನಂತರ ರೈತರ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಇದಕ್ಕಾಗಿ ತಿಂಗಳುಗಟ್ಟಲೇ ಎತ್ತುಗಳನ್ನು ತಯಾರು ಮಾಡಲಾಗಿರುತ್ತದೆ. ಅವುಗಳ ಶಕ್ತಿ ಪ್ರದರ್ಶನಕ್ಕೆ ಈ ಕಾರ ಹುಣ್ಣಿಮೆ ಆಚರಣೆ ವೇದಿಕೆಯಾಗುತ್ತೆ ಎನ್ನುತ್ತಾರೆ ಗ್ರಾಮಸ್ಥರು.
ಹಬ್ಬದ ಹಿನ್ನೆಲೆಯಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿರುತ್ತೆ. ಮೂರು ದಿನಗಳ ಕಾಲ ಬ್ರಹ್ಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ. ಈ ಆಚರಣೆಯನ್ನ ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರವೇ ಹರಿದುಬರುತ್ತೆ. ಈ ಹಬ್ಬದಲ್ಲಿ ಏನೇ ಅವಘಡವಾದರೂ ಬಂಡಿ ಓಟ ಮಾತ್ರ ನಿಲ್ಲದಿರುವುದು ಇಲ್ಲಿನ ವಿಶೇಷತೆ. ಈ ದಿನಗಳಲ್ಲಿಯೇ ಗ್ರಾಮಸ್ಥರು ತಮ್ಮ ಅಳಿಯ ಮತ್ತು ಸೊಸೆಯನ್ನ ನಿಗದಿ ಮಾಡುತ್ತಾರೆ. ಇದಕ್ಕಾಗಿ ಅಳಿಯಂದಿರು ಮತ್ತು ಮಕ್ಕಳು ವಿದೇಶದಲ್ಲಿದ್ದರೂ ಹಬ್ಬದಂದು ಗ್ರಾಮದಲ್ಲಿ ಹಾಜರಿರುತ್ತಾರೆ.