ಹಾವೇರಿ: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಗೆ ಕಲಾವಿದರು ವಿಘ್ನವಿನಾಶಕನ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಬಹುತೇಕ ಕುಟುಂಬಗಳು ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಸುಮಾರು 40ಕ್ಕೂ ಅಧಿಕ ಕುಟುಂಬಗಳ ಸದಸ್ಯರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗೋಟಗೊಡಿ ಸೇರಿದಂತೆ ವಿವಿಧ ಕೆರೆಗಳಲ್ಲಿ ಮಣ್ಣು ಸಂಗ್ರಹಿಸುವ ಈ ಕುಟುಂಬದವರು ಹದವಾಗಿ ಮಣ್ಣು ಹರಲು(ಕ್ಲೇ) ಮಾಡಿಕೊಂಡು ವಿಗ್ರಹ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಕುನ್ನೂರು ಗಣೇಶ ವಿಗ್ರಹಕ್ಕೂ ಶಿಶುನಾಳ್ ಶರೀಫರಿಗೂ ಒಂದು ನಂಟಿದೆ. ಇಲ್ಲಿಯ ಚಿತ್ರಗಾರ ಕುಟುಂಬದ ಮೂರ್ತಿಗಳಿಗೆ ಶಿಶುನಾಳ್ ಶರೀಫರ ಮೆಚ್ಚುಗೆ ಸಿಕ್ಕಿತ್ತು. ಅಂದಿನಿಂದ ಚಿತ್ರಗಾರ ಕುಟುಂಬ ಗ್ರಾಮದಲ್ಲಿ ಗಣೇಶ ವಿಗ್ರಹ ತಯಾರಿಕೆಯಲ್ಲಿ ಮುಂಚೂಣೆಯಲ್ಲಿದೆ. ಚಿತ್ರಗಾರ ಕುಟುಂಬದಿಂದ ಗಣೇಶ ವಿಗ್ರಹ ತಯಾರಿಕೆ ಕಲಿತ ಉಳಿದ ಕುಟುಂಬಗಳು ಈಗ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.
ಈ ಕುರಿತು ಕಲಾವಿದ ಚಂದ್ರಶೇಖರ್ ಮಾತನಾಡಿ, ಈ ಕಲೆಯನ್ನು ನಮ್ಮ ಅಜ್ಜ, ಅಪ್ಪನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ನಾವು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಕುನ್ನೂರು ಗಣಪತಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಗಣಪತಿ ಸೋಂಡಿಲು ಮತ್ತು ಮುಖಲಕ್ಷಣ ವಿಭಿನ್ನವಾಗಿರುತ್ತದೆ. ಹೀಗಾಗಿ ಜನರು ಕುನ್ನೂರು ಗ್ರಾಮದ ಗಣೇಶ್ ವಿಗ್ರಹ ಎಂದು ಸುಲಭವಾಗಿ ಕಂಡುಹಿಡಿಯುತ್ತಾರೆ ಎಂದರು.
ಇಲ್ಲಿ ತಯಾರಾಗುವ ವಿನಾಯಕನ ಮೂರ್ತಿಗಳು ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮಾರಾಟವಾಗುತ್ತವೆ. ಗ್ರಾಮಗಳಲ್ಲಿ ಗ್ರಾಹಕರಿಂದ ಬೇಡಿಕೆ ತಿಳಿದುಕೊಂಡ ಕೆಲ ಕಲಾವಿದರು ಸಹ ಇಲ್ಲಿಗೆ ಬಂದು ನೂರು ಇನ್ನೂರು ಗಣಪತಿ ವಿಗ್ರಹ ಖರೀದಿಸುತ್ತಾರೆ. ಇನ್ನು ಗ್ರಾಹಕರು ಖುದ್ದಾಗಿ ಬಂದು ವಿಗ್ರಹ ಖರೀದಿಸಿ ನಂತರ ಪ್ರತಿಷ್ಠಾಪನೆ ಮಾಡುತ್ತಾರೆ. ಆರು ಇಂಚಿನಿಂದ ಹಿಡಿದು 5 ಅಡಿಯವರೆಗೆ ಗಣೇಶ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ ಎಂದು ತಿಳಿಸಿದರು.
ಕಲಾವಿದ ಸಂತೋಷ್ ಮಾತನಾಡಿ, ನಾವು 40 ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಇಲ್ಲಿನ ಗಣೇಶ ಮೂರ್ತಿಗಳು ರಾಜ್ಯಾದ್ಯಂತ ಪ್ರಸಿದ್ಧವಾಗಿವೆ. ಬೇರೆ ಜಿಲ್ಲೆಗಳಿಂದ ಗ್ರಾಹಕರು ಇಲ್ಲಿಗೆ ಬಂದು ಗಣೇಶ ಮೂರ್ತಿಗಳನ್ನು ಹೋಲ್ ಸೇಲ್ ಆಗಿ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.
ಇನ್ನು ಈ ಗ್ರಾಮದಲ್ಲಿ ಗಣೇಶ ವಿಗ್ರಹ ತಯಾರಿಸುವ ಕುಟುಂಬಗಳು ಕನಿಷ್ಠ 500 ಗಣೇಶ ಮೂರ್ತಿಗಳನ್ನಾದರೂ ಸಿದ್ಧಪಡಿಸುತ್ತವೆ. ಕೆಲ ಕುಟುಂಬದವರು 1500 ಗಣೇಶ ಮೂರ್ತಿಗಳನ್ನ ತಯಾರಿಸುವುದು ಉಂಟು. ವರ್ಷದಿಂದ ವರ್ಷಕ್ಕೆ ಗ್ರಾಮದಲ್ಲಿ ಗಣೇಶ ಮೂರ್ತಿಗಳ ತಯಾರಕರ ಸಂಖ್ಯೆ ಸಹ ಅಧಿಕವಾಗುತ್ತಿದೆ. ಗಣೇಶ ಚತುರ್ಥಿಗೆ ಬೆರಳೆಣಿಕೆಯಷ್ಟು ದಿನಗಳಿರುವಾಗ ಬಣ್ಣ ಹಚ್ಚುವ ಕಲಾವಿದರು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಾರೆ.
ಈ ಗ್ರಾಮದಲ್ಲಿ ಎಲ್ಲಾ ಕುಟುಂಬಗಳು ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುತ್ತವೆ. ಯಾವ ಕುಟುಂಬಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸುವುದಿಲ್ಲ. ಅಚ್ಚುಗಳಿಂದ ಗಣೇಶ ಮೂರ್ತಿ ತಯಾರಿಸಲಾಗುತ್ತದೆ. ವೈವಿಧ್ಯಮಯ ಗಣೇಶ ಮೂರ್ತಿಗಳಿಂದ ಕುನ್ನೂರು ಗ್ರಾಮ ಗಣೇಶ ಗ್ರಾಮವಾಗಿ ಹೆಸರುವಾಸಿಯಾಗಿದೆ. ಈ ವೇಳೆ ಕುನ್ನೂರು ಗ್ರಾಮಕ್ಕೆ ಕಾಲಿಟ್ಟರೆ ಎಲ್ಲ ಮನೆಗಳಲ್ಲಿ ಗಣೇಶ ಮೂರ್ತಿಗಳ ತಯಾರಿಸುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಇದನ್ನೂ ಓದಿ: ಹಾವೇರಿ: ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ.. ಐವರಿಗೆ ಗಾಯ