ಹಾವೇರಿ: ಜಿಲ್ಲೆಯ ಸವಣೂರು ನಗರದ ಕಾರಡಗಿ ರಸ್ತೆಯಲ್ಲಿ ಹಾಡಹಗಲೇ ನಡೆದ ರೌಡಿಶೀಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ಆಗಸ್ಟ್ 8ರಂದು ಸವಣೂರು ನಗರದ ಕಾರಡಗಿ ರಸ್ತೆಯಲ್ಲಿ ರೌಡಿಶೀಟರ್ನ ಬರ್ಬರ ಕೊಲೆಯಾಗಿತ್ತು. ಕೊಲೆಯಾದ ಮರುದಿನ ಕೊಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ತೀವ್ರ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಮ್ರಾನ್ ಎಂಬಾತ ಮತ್ತು ಆತನ ಸಹೋದರರಾದ ರೇಹಾನ್, ಅಜೀಜ್, ತನ್ವೀರ್ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಲ್ಲಿ ನಾಲ್ವರು ಸಹೋದರರಾಗಿದ್ದಾರೆ. ಇನ್ನು ಜನರಿಗೆ ಆತಂಕ ಉಂಟುಮಾಡಿದ ವಿಡಿಯೋ ಚಿತ್ರೀಕರಿಸಿದ್ದ ಆಯೂಬ್ ಬೇಗ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಹಜರತ್ ಮತ್ತು ಆರೋಪಿ ಇಮ್ರಾನ್ ನಡುವೆ ವೈಷಮ್ಯವಿತ್ತು. ಹಜರತ್ ಗೋವಾದಲ್ಲಿದ್ದ ಆಗಾಗ ಸವಣೂರಿಗೆ ಬಂದು ಇಮ್ರಾನ್‌ಗೆ ತೀವ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ನಡು ರಸ್ತೆಯಲ್ಲಿ ಅಟ್ಟಾಡಿಸಿ ಸವಣೂರು ರೌಡಿಶೀಟರ್ ಬರ್ಬರ ಹತ್ಯೆ.. ವಿಡಿಯೋ ವೈರಲ್..!
ಇಷ್ಟೇ ಅಲ್ಲದೆ ಇಮ್ರಾನ್ ಮನೆಗೆ ಬಂದು ಅವಾಜ್ ಹಾಕಿದ್ದಲ್ಲದೇ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಕೊಲೆಯಾಗಿರುವ ಹಜರತ್, ಕಾರಡಗಿ ನಿವಾಸಿಯಾಗಿದ್ದು ಈತ ಗೋವಾದಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಅಲ್ಲದೇ ಸವಣೂರು ಮತ್ತು ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಇವನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ರೌಡಿಶೀಟರ್ ಹಜರತ್‌ನನ್ನ ಇಮ್ರಾನ್ ಮತ್ತು ಆತನ ಸಹೋದರರು ಸೇರಿ ನಡುರಸ್ತೆಯಲ್ಲಿ ಹಾಡಹಗಲೆ ಬರ್ಬರವಾಗಿ ಕೊಲೆ ಮಾಡಿದ್ದರು.