ರಾಜ್ಯದಲ್ಲಿ ಅಲ್ಲಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಆದ್ರೆ ಈ ಬಾರಿ ಅಗ್ನಿ ಅವಘಡಗಳ ಪ್ರಮಾಣ ಕೊಂಚ ಇಳಿಕೆ ಕಂಡಿದೆ. ರೈತರ ಜಮೀನಿನಲ್ಲಿ ಹುಲ್ಲಿನ ಬಣವೆಗಳಿಗೆ ಬಂಕಿ ಬಿದ್ದಿದ್ದು, ಬಿಟ್ಟರೆ ಇತರೆ ಸ್ಫೋಟ ಪ್ರಕರಣಗಳು ಹೆಚ್ಚಾಗಿ ಸಂಭವಿಸಿಲ್ಲ.
ಬೆಣ್ಣೆನಗರಿ ದಾವಣಗೆರೆಯಲ್ಲಿ 2020ರಲ್ಲಿ 546 ಅಗ್ನಿ ಪ್ರಕರಣಗಳು ಸಂಭವಿಸಿದ್ದು, ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿದ್ದವು. ಈ ವರ್ಷವೂ ಕೆಲ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾಗಿದ್ದು ಬಿಟ್ಟರೆ, ಇತರೆ ಸ್ಫೋಟ ಪ್ರಕರಣಗಳು ತೀರಾ ಕಡಿಮೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಾವೇರಿಯಲ್ಲಿ ಈ ಸಾಲಿನಲ್ಲಿ 54 ಅಗ್ನಿ ಅವಘಡಗಳು ಸಂಭವಿಸಿವೆ. ಇಲ್ಲೂ ಕೂಡ ಒಂದು ಕಾರ್ಖಾನೆಯಲ್ಲಿ ಅಗ್ನಿ ದುರಂತ ಬಿಟ್ಟರೆ ಉಳಿದೆಲ್ಲವೂ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಪ್ರಕರಣಗಳಾಗಿವೆ.
ಕೊರೊನಾ ಹಾವಳಿ, ಲಾಕ್ಡೌನ್ ಇದ್ದಿದ್ರಿಂದ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸಿಲ್ಲ ಅಂತಾರೆ ಅಗ್ನಿಶಾಮಕ ದಳದ ಅಧಿಕಾರಿ ವರ್ಗ. ಒಟ್ಟಾರೆ ಇತರೆ ಅಗ್ನಿ ಅವಘಡಗಳಿಗಿಂತ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾಗಿರುವುದೇ ಹೆಚ್ಚು.