ಹಾವೇರಿ: ಚಿತ್ರ ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ವಂಶಗಳ ಬಗ್ಗೆ ಮಾತನಾಡಿದ ವಿಚಾರವಾಗಿ ದೂರು ದಾಖಲಾಗಿದೆ. ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ, ಹಾಗೂ ಭಯ ಹಾಗೂ ಭೀತಿಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕಿ ಹಾಗೂ ಚಿತ್ರ ನಟಿ ಶೃತಿ ವಿರುದ್ಧ ಕಲಂ 505 (2)ರಡಿ ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಹಿರೆಕೇರೂರು ನೋಡಲ್ ಅಧಿಕಾರಿ ಪಂಪಾಪತಿ ಎಂಬುವರು ನಟಿ ಶೃತಿ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಾರದ ಹಿಂದೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ನಟಿ ಶೃತಿ ಅವರು ಭಾಷಣ ಮಾಡಿದ್ದರು. ಈ ಸಂಬಂಧ ಈಗ ದೂರು ದಾಖಲಿಸಲಾಗಿದೆ.
"ಪ್ರಮುಖವಾಗಿ ರಾಜ್ಯದಲ್ಲಿ ಮೂರು ಪಕ್ಷಗಳಿವೆ. ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡ್ತೀನಿ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕೆಂದರೆ ಜೆಡಿಎಸ್ಗೆ ವೋಟ್ ಹಾಕಿ. ನಿಮ್ಮ ವಂಶ ಬಿಟ್ಟು ಹೊರ ದೇಶದವರ ವಂಶ ಅಭಿವೃದ್ಧಿ ಆಗಬೇಕೆಂದರೆ ಕಾಂಗ್ರೆಸ್ಗೆ ವೋಟ್ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕು ಎಂದರೆ ಭಾರತೀಯ ಜನತಾ ಪಾರ್ಟಿಗೆ ವೋಟ್ ಹಾಕಿ" ಎಂದು ಶೃತಿ ಭಾಷಣ ಮಾಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ರಾಜಕಾರಣ ಕುರಿತು ಶೃತಿ ಅಪಹಾಸ್ಯ ಮಾಡಿ ವ್ಯಂಗ್ಯವಾಡಿದ್ದರು. ಈ ಬಗ್ಗೆ ನೋಡಲ್ ಅಧಿಕಾರಿ ದೂರಿನ ಹಿನ್ನೆಲೆಯಲ್ಲಿ ಶೃತಿ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಸವದಿ ನಿರ್ಧಾರ.. ನಾಳೆಯೇ ಅಂತಿಮ ತೀರ್ಮಾನ