ಹಾವೇರಿ: ಲಂಚ ಕೇಳಿದ ಅಧಿಕಾರಿಗಳಿಗೆ ಎತ್ತು ನೀಡಲು ರೈತನೊಬ್ಬ ಮುಂದಾಗಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪುರಸಭೆಯಲ್ಲಿ ನಡೆದಿದೆ. "ಸಾರ್, ನನ್ನ ಬಳಿ ನೀವು ಕೇಳಿದಷ್ಟು ಕೊಡೋಕೆ ದುಡ್ಡಿಲ್ಲ. ಇದಕ್ಕೆ ಬದಲು ಒಂದು ಎತ್ತು ತೆಗೆದುಕೊಳ್ಳಿ" ಎಂದು ಆತ ಅಳಲು ವ್ಯಕ್ತಪಡಿಸಿದ್ದಾನೆ.
ಯಲ್ಲಪ್ಪ ರಾಣೋಜಿ ಎಂಬ ರೈತ ಈ ರೀತಿ ಬೇಸರ ವ್ಯಕ್ತಪಡಿಸಿದ್ದಾನೆ. ಲಂಚ ಕೇಳಿದ್ದ ಪುರಸಭೆ ಅಧಿಕಾರಿಗಳಿಗೆ ಬಾರುಕೋಲು ಮತ್ತು ಎತ್ತು ನೀಡಲು ಈತ ಮುಂದಾಗಿದ್ದಾನೆ. "ಮನೆ ಖಾತೆ ಬದಲಾಯಿಸಲು ಹಣ ಕೊಡುವಂತೆ ಅಧಿಕಾರಿಗಳು ಕೇಳಿದ್ದರು. ಈ ಹಿಂದೆ 25 ಸಾವಿರ ರೂ ಹಣ ಪಡೆದ ಅಧಿಕಾರಿಗಳು ಟ್ರಾನ್ಸ್‌ಫರ್ ಆಗಿದ್ದಾರೆ. ಈಗ ಹೊಸದಾಗಿ ಬಂದವರು ಮತ್ತೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ" ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ಹೀಗಾಗಿ, ದುಡ್ಡು ಕೊಡುವ ತನಕ ಎತ್ತು ಇಟ್ಕೊಳಿ ಎಂದು ಹೇಳಿ ಪುರಸಭೆಯ ಮುಂದೆ ಯಲ್ಲಪ್ಪ ಕಾಣಿಸಿಕೊಂಡನು.
ಅಧಿಕಾರಿಗಳ ಪ್ರತಿಕ್ರಿಯೆ: ರೈತನ ಸಂಕಷ್ಟ ಆಲಿಸಿದ ಅಧಿಕಾರಿಗಳು ಇಂದು ಸಂಜೆಯೊಳಗೆ ಖಾತೆ ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ರೈತನಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಅಧಿಕಾರಿಗಳಿಗೆ ನೋಟಿಸ್: ಪ್ರಕರಣ ಸಂಬಂಧ ಪುರಸಭೆಯ ಮೂರು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ಅಧಿಕಾರಿ
ಲೋಕಾಯುಕ್ತ ದಾಳಿ ಪ್ರಕರಣ: ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಅರಣ್ಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದಿತ್ತು. ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂರ್ಣಿಮಾ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಕಾಮಗಾರಿ ವಿಚಾರವಾಗಿ ಮುಂಗಡ ಹಣ ಪಡೆಯುವಾಗ ಮೈಸೂರು ಮತ್ತು ಮಡಿಕೇರಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ