ರಾಣೇಬೆನ್ನೂರು (ಹಾವೇರಿ): ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ರಾಣೇಬೆನ್ನೂರು ನಗರದ ಖ್ಯಾತ ವೈದ್ಯರಾದ ಡಾ.ಮನೋಜ್ ಸಾಹುಕಾರ ಆಯ್ಕೆಯಾಗಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸ್ಟೇಟ್ ಹ್ಯಾಂಡ್ ಬಾಲ್ ಅಸೋಸಿಯೇಷನ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ನಂತರ ಕೆಲ ನಿಯಮಗಳು ಹಾಗೂ ಕಾನೂನಿನ ತೊಡಕಿನ ಕಾರಣ ಅಧ್ಯಕ್ಷ ಸ್ಥಾನ ಘೋಷಣೆಯಾಗಿರಲಿಲ್ಲ. ಗುರುವಾರ ಹ್ಯಾಂಡ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಎಂ.ರಾಮಸುಬ್ರಹ್ಮಣಿ ಅವರು, ಡಾ.ಮನೋಜ್ ಸಾಹುಕಾರ ಅವರು ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಪತ್ರ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಮನೋಜ್ ಸಾಹುಕಾರ, ಹ್ಯಾಂಡ್ ಬಾಲ್ ಆಟಕ್ಕೆ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ಆದ್ಯತೆ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಕೇವಲ ಪ್ರಭಾವಿಗಳು ಮಾತ್ರ ಆಯ್ಕೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಇನ್ನೂ ಯಾವುದೇ ರೀತಿಯ ಪ್ರಭಾವ ಇರುವುದಿಲ್ಲ. ಸಾಮರ್ಥ್ಯ, ಕೌಶಲ್ಯ ಹೊಂದಿರುವಂತಹ ಯುವಕ, ಯುವತಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.