ಹಾವೇರಿ : ಸಾಮಾನ್ಯವಾಗಿ ಮನುಷ್ಯರಿಂದ ರಕ್ತವನ್ನು ಪಡೆದು ಮನುಷ್ಯರಿಗೆ ರಕ್ತ ಹಾಕಲಾಗುತ್ತದೆ. ಆದರೆ ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಲ್ಲಿ ಶ್ವಾನವೊಂದಕ್ಕೆ ಮತ್ತೊಂದು ಶ್ವಾನ ರಕ್ತದಾನ ಮಾಡಿದ ಘಟನೆ ನಡೆದಿದೆ. ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಅಕ್ಯೂಟ್ ಲೆಪ್ಟೋಸ್ಪೇರೂಸಿಸ್ ಕಾಯಿಲೆಯಿಂದ ರಾಕಿ ಎಂಬ ಶ್ವಾನ ಬಳಲುತ್ತಿತ್ತು. ತುರ್ತಾಗಿ ರಾಕಿಯ ಶಸ್ತ್ರಚಿಕಿತ್ಸೆಗೆ ರಕ್ತ ಬೇಕಾಗಿತ್ತು.
ಈ ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯ ಶ್ವಾನ ತರಬೇತುದಾರ ರಂಜಿತ ತಮ್ಮ ಶ್ವಾನ ಸಿರಿಯಿಂದ ರಕ್ತದಾನ ಮಾಡಿಸಿದರು. ಆ ಮೂಲಕ ರಕ್ತ ಸೈನಿಕರ ತವರೂರು ಎಂಬ ಖ್ಯಾತಿಯ ಅಕ್ಕಿ ಆಲೂರು ಮತ್ತೊಂದು ವಿಶಿಷ್ಠ ಘಟನೆಗೆ ಸಾಕ್ಷಿಯಾಯಿತು.
ಎರಡನೇಯ ಬಾರಿ ಶ್ವಾನದಿಂದ ರಕ್ತದಾನ: ರಾಕಿ ಶ್ವಾನದ ಚಿಕಿತ್ಸೆಯನ್ನು ಅಕ್ಕಿ ಆಲೂರಿನ ಪಶು ಆಸ್ಪತ್ರೆಯಲ್ಲಿ ನಡೆಸಲಾಯಿತು. ರಕ್ತದಾನಿ ಪಶುವೈದ್ಯಾಧಿಕಾರಿ ಡಾ. ಅಮಿತ ಪುರಾಣಿಕರ ಮತ್ತು ಪಶುವೈದ್ಯ ರಕ್ತ ಸೈನಿಕ ಡಾ. ಸಂತೋಷ ಮತ್ತು ಸಿಬ್ಬಂದಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದರು. ಈ ವಿಶಿಷ್ಟ ರಕ್ತದಾನಕ್ಕೆ ಅಕ್ಕಿ ಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಹಕಾರ ನೀಡಿತು. ಈ ಮೂಲಕ ಅಕ್ಕಿಆಲೂರಿನಲ್ಲಿ ಎರಡನೇಯ ಬಾರಿ ಶ್ವಾನದಿಂದ ರಕ್ತದಾನ ಮಾಡಿಸಲಾಯಿತು.
ಪ್ರಥಮ ಶತಕ ರಕ್ತದಾನಿ: ಈಗಾಗಲೇ ಗೂಗಲ್ ಮ್ಯಾಪ್‌ನಲ್ಲಿ ಅಕ್ಕಿ ಆಲೂರು ಗ್ರಾಮ ರಕ್ತಸೈನಿಕರ ತವರೂರು ಎನಿಸಿಕೊಂಡಿದೆ. ಈ ಮಧ್ಯ ನೆಚ್ಚಿನ ಶ್ವಾನಕ್ಕೆ ಸಹ ರಕ್ತದಾನ ಮಾಡಿಸುವ ಮೂಲಕ ಬ್ಲಡ್ ಆರ್ಮಿ ವಿಶೇಷತೆ ಮೆರೆದಿದೆ. ಅಕ್ಕಿಆಲೂರಿನಲ್ಲಿ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಕರಬಸಪ್ಪ ಗೊಂದಿ ಅವರು ಈ ಸಂಘಟನೆ ಸ್ಥಾಪಿಸಿದ್ದಾರೆ. ಈ ಸಂಘವು ನೇತ್ರದಾನ, ರಕ್ತದಾನ, ಚರ್ಮದಾನದ ಮಹತ್ವ ಸಾರುತ್ತಿದೆ. ಆರ್ಮಿಯ ಮುಖ್ಯಸ್ಥ ಕರಬಸಪ್ಪ ಇದುವರೆಗೂ 100 ಬಾರಿ ರಕ್ತದಾನ ಮಾಡುವ ಮೂಲಕ ಹಾವೇರಿ ಜಿಲ್ಲೆಯ ಪ್ರಥಮ ಶತಕ ರಕ್ತದಾನಿ ಎನಿಸಿಕೊಂಡಿದ್ದಾರೆ.
ಹೆಣ್ಣು ಶ್ವಾನಕ್ಕೆ ರಕ್ತದಾನ (ಪ್ರತ್ಯೇಕ ಘಟನೆ) : ಧಾರವಾಡದ ಕೃಷಿ ಮೇಳದಲ್ಲಿ ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ (ಸೆಪ್ಟೆಂಬರ್ 19-2022) ಉಳಿಸಿತ್ತು. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆ ಮೆರೆದಿದ್ದರು.
ಹುಬ್ಬಳ್ಳಿ ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನ ತೀವ್ರ ಜ್ವರದಿಂದ ಬಳಲುತಿತ್ತು. ಧಾರವಾಡ ಕೃಷಿ ವಿವಿಯ ಪಶು ಆಸ್ಪತ್ರೆಗೆ ಮಾಯಾಗೆ ಚಿಕಿತ್ಸೆ ಕೊಡಿಸಲು ತರಲಾಗಿತ್ತು. ಈ ವೇಳೆ ಪ್ರಾಣಿ ಪ್ರಿಯ ಸೋಮಶೇಖರ್ ಮಾಯಾನನ್ನು ನೋಡಿ ಮರುಗಿದ್ದರು. ನಂತರ ತಮ್ಮ ಚಾರ್ಲಿ ಹೆಸರಿನ ಜರ್ಮನ್ ಶಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದರು.
ಇದನ್ನೂ ಓದಿ: ಧಾರವಾಡ: ಹೆಣ್ಣು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಚಾರ್ಲಿ