ಹಾನಗಲ್(ಹಾವೇರಿ): 84ನೇ ವಯಸ್ಸಿನ ಚನ್ನಬಸಪ್ಪ ಎಂಬವರು ಮೃದಂಗ ನುಡಿಸುವಲ್ಲಿ ಪರಿಣಿತರು. ಇದೀಗ ಇವರ ಸಾಧನೆಯನ್ನು ಹುಡುಕಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ತಾಲೂಕಿನ ಮಾಸನಕಟ್ಟಿ ಗ್ರಾಮದ ಚನ್ನಬಸಪ್ಪ ಬೆಂಡಿಗೇರಿಯವರು ಕಳೆದ 75 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಮಕ್ಕಳಿಗೆ ಮೃದಂಗ ಬಾರಿಸುವ ಕಲೆಯನ್ನು ಇವರು ಹೇಳಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ದೊಡ್ಡಾಟದ ಪ್ರದರ್ಶನ ಮಾಡಿದ್ದಾರೆ.
ಇವರು ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ಪಟ್ಟಣ, ನಗರ ಪ್ರದೇಶಗಳಲ್ಲಿ ತಮ್ಮ ತಂಡದ ಜೊತೆಗೆ ಕಾರ್ಯಕ್ರಮ ನೀಡಿದ್ದಾರೆ. ಈ ಮೂಲಕ ಇವರು ದೊಡ್ಡಾಟದ ಚನ್ನಬಸಪ್ಪ ಎಂದೇ ಚಿರಪರಿಚಿತರು. ಇವರ ಗ್ರಾಮವಾದ ಮಾಸನಕಟ್ಟಿಯಲ್ಲಿ ಯುವಕರ ತಂಡವನ್ನು ಕಟ್ಟಿದ್ದು ದೊಡ್ಡಾಟ ಇನ್ನೂ ಜೀವಂತವಾಗಿರುವಂತೆ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.
ದೊಡ್ಡಾಟದಲ್ಲಿ ಮಾಡಿರದ ಪಾತ್ರಗಳಿಲ್ಲ. ಕರ್ಣ, ಅಭಿಮನ್ಯು, ಚಿತ್ರಾಂಗದೆ, ಪ್ರಭಾವತಿ, ಗಣಪತಿ ಹೀಗೆ ಹತ್ತು ಹಲವಾರು ಪಾತ್ರಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳಿಂದ ಸೈ ಎನ್ನಿಸಿಕೊಂಡಿದ್ದಾರೆ. ತಮ್ಮ ಬಾಲ್ಯದ ವಯಸ್ಸಿನಲ್ಲಿ ಭಜನೆ ಮಾಡುತ್ತಾ ಆಸಕ್ತಿ ಬೆಳೆಸಿಕೊಂಡ ಇವರು ದೊಡ್ಡಾಟದ ಕಡೆ ಗಮನ ಹರಿಸಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಾ ಮೃದಂಗ ಬಾರಿಸುವುದನ್ನೂ ಕಲಿತರು. ಇವರ ಸಾಧನೆ, ಕಲಾಸೇವೆ ಗುರುತಿಸಿರುವ ಸರ್ಕಾರ ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.