ಹಾವೇರಿ : ಹಾನಗಲ್ ಉಪ ಚುನಾವಣೆ ಬಂದಿದೆ. ನಿನ್ನೆ ಗೋಣಿ ಚೀಲ ಬೇರೆ ಬಂದಿದೆ ಅಂತೆ. ಮಸ್ಕಿಯಲ್ಲೂ ಹಿಂಗೆ ಆಯ್ತು, ಬಿ ವೈ ವಿಜಯೇಂದ್ರ ಎರಡೆರಡು ಸಾವಿರ ಹಣ ಹಂಚಿದ್ರು. ಆದ್ರೂ ಅಲ್ಲಿನ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಜಿಲ್ಲೆಯ ಅರಳೇಶ್ವರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ನೋಟು ತೆಗೆದುಕೊಳ್ಳಿ ಪರವಾಗಿಲ್ಲ. ಆದ್ರೆ, ವೋಟು ಮಾತ್ರ ಕಾಂಗ್ರೆಸ್‌ಗೆ ಹಾಕಿ. ಅವರು ಕೊಡುವ ಹಣ ಬೇರೆಯಾರದ್ದೂ ಅಲ್ಲ. ಅದು ನಿಮ್ಮದೇ. ಕೊರೊನಾ ಸಮಯದಲ್ಲಿ ನೀಡಬೇಕಾಗಿತ್ತು, ಇವಾಗ ಅದನ್ನು ನೀಡುತ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಸಿಕ್ಕ ಹಣ ನೀಡಿದ ಡಿಕೆಶಿ
ಮತ ಪ್ರಚಾರ ನಡೆಸಿ ಡಿ.ಕೆ.ಶಿವಕುಮಾರ್ ಅವರು ಹಿಂತಿರುಗುವ ವೇಳೆ ಕಾರ್ಯಕರ್ತರೊಬ್ಬರಿಗೆ 500 ರೂ. ಸಿಕ್ಕಿದೆ. ಅದನ್ನು ತಂದು ನೀಡಿದರು. ವೇದಿಕೆಯ ಮೇಲೆ ನಿಂತಿದ್ದ ಕೆಪಿಸಿಸಿ ಅಧ್ಯಕ್ಷರು, ಯಾರದಾದ್ರೂ ಪಿಕ್ ಪ್ಯಾಕೇಟ್ ಆಗಿದೆಯಾ ನೋಡಿಕೊಳ್ರಪ್ಪಾ ಅಂತಾ ಮೈಕ್ನಲ್ಲಿ ಕೂಗಿ ಹೇಳಿದರು. ಆ ಸಂದರ್ಭದಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಅಲ್ಲಿಗೆ ಬಂದು ಹಣ ಪಡೆದ.