ಹಾವೇರಿ: ಈ ವರ್ಷ ಕೊರೊನಾ ಮಧ್ಯೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಎದುರಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ತಿಳಿಸಿದರು.
ನಗರದ ಹುಕ್ಕೇರಿಮಠ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪರೀಕ್ಷೆಯನ್ನು ಹೆಚ್ಚು ಶ್ರದ್ಧೆ, ಅದ್ಧೂರಿಯಿಂದ ಹಾಗೂ ಸಂಭ್ರಮದಿಂದ ಎದುರಿಸುತ್ತಿದ್ದೇವೆ ಎಂದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ 33 ವಿದ್ಯಾರ್ಥಿಗಳು ಕಂಟೇನ್ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ಪ್ರತ್ಯೇಕವಾದ ವಾಹನ ಮತ್ತು ಕೊಠಡಿಯನ್ನ ನಿಗದಿಪಡಿಸಿದ್ದು, ಪರೀಕ್ಷೆ ಬರೆಯಲು ಉತ್ತಮ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ವಿವರಿಸಿದರು.
ಹಿಂದಿನ ಎಸ್ಎಸ್ಎಲ್ಸಿ ಪರೀಕ್ಷೆಗಿಂತ ಈ ವರ್ಷದ ಪರೀಕ್ಷೆ ನಿಜಕ್ಕೂ ಒಂದು ಸವಾಲಾಗಿದೆ. ಈ ಸವಾಲನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಾಯದಿಂದ ಯಾವುದೇ ತೊಂದರೆಗಳಾಗದಂತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.