ಹಾವೇರಿ: ರಾಜ್ಯದಲ್ಲಿ ಕೊರೊನಾ ವೈರಸ್, ಹಕ್ಕಿ ಜ್ವರ ಕಾಣಿಸಿಕೊಂಡು ಅವಾಂತರ ಸೃಷ್ಟಿಸುತ್ತಿರುವ ಬೆನ್ನಲ್ಲೇ ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಇದೀಗ ಕಾಗೆಗಳು ಸತ್ತು ಬೀಳುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ 20ಕ್ಕೂ ಅಧಿಕ ಕಾಗೆಗಳು ಸಾವನ್ನಪ್ಪಿವೆ. ಸತ್ತ ಕಾಗೆಗಳನ್ನು ತಿಂದ ನಾಯಿಗಳು ಗೂರಲಾರಂಭಿಸಿವೆ(ಕೆಮ್ಮುತ್ತಿವೆ). ಇದರಿಂದ ಮತ್ಯಾವುದಾದರೂ ಹೊಸ ರೋಗ ಬಂತಾ ಅಂತ ಗ್ರಾಮದ ಜನರು ಪಶು ವೈದ್ಯಾಧಿಕಾರಿಗಳಿಗೆ ಮತ್ತು ಆರೋಗ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿ ವಿಷ ಪದಾರ್ಥ ಸೇವನೆ ಅಥವಾ ಬಿಸಿಲಿನ ತಾಪಮಾನಕ್ಕೆ ಕಾಗೆಗಳು ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸತ್ತ ಕಾಗೆಗಳ ಮಾದರಿ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಾರೆ ಕೊರೊನಾ ಭೀತಿಯಲ್ಲಿರುವ ಜನ ಸದ್ಯ ಕಾಗೆಗಳ ಸಾವಿನಿಂದ ಭಯಭೀತರಾಗಿದ್ದು, ಆದಷ್ಟೂ ಬೇಗ ಜನರ ಆತಂಕ ದೂರ ಮಾಡಬೇಕಿದೆ.