ಹಾವೇರಿ: ಹಲವು ವರ್ಷಗಳಿಂದ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಸುತ್ತಮುತ್ತ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ 20ಕ್ಕೂ ಅಧಿಕ ಅಲೆಮಾರಿ ಕುಟುಂಬಗಳಿಗೆ ಈಗ ತೀವ್ರ ಸಂಕಷ್ಟ ಎದುರಾಗಿದೆ.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಲೆಮಾರಿಗಳನ್ನು ಬೇರೆ ಗ್ರಾಮಗಳ ಜನರು ಊರಿಗೆ ಸೇರಿಸಿಕೊಳ್ಳುತ್ತಿಲ್ಲ. ಊರಲ್ಲಿ ಟೆಂಟ್ ಹಾಕಿದರೆ, ಅದನ್ನು ಕಿತ್ತಿಸಿ ಬೇರೆ ಕಡೆಗೆ ಹೋಗುವಂತೆ ಹೇಳುತ್ತಿದ್ದಾರೆ. ಹೀಗಾಗಿ ಕೆಲಸ, ಊಟಕ್ಕೆ ದಿನಸಿ, ಕುಡಿಯಲು ನೀರೂ ಇಲ್ಲದೆ ಪರದಾಡುತ್ತಿದ್ದಾರೆ.
ಎಳೆ ಮಕ್ಕಳನ್ನು ಹೊಂದಿರುವ ಈ ಅಲೆಮಾರಿ ಕುಟುಂಬಗಳಿಗೆ ಮಹಾಮಾರಿ ಕೊರೊನಾ ಇನ್ನಿಲ್ಲದ ಸಂಕಟ ತಂದೊಡ್ಡಿದೆ. ಸುಮಾರು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ನಮ್ಮ ಪರಿಸ್ಥಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗೊತ್ತಿದೆ. ಆದರೆ, ಯಾರೂ ನಮಗೆ ಎರಡು ಹೊತ್ತು ಊಟ, ವಾಸಕ್ಕೆ ಆಶ್ರಯ ಕೊಡಿಸುತ್ತಿಲ್ಲ ಎಂದು ಸಮಸ್ಯೆಗಳ ರಾಶಿಯನ್ನು ಹೇಳಿಕೊಂಡ ಅಲೆಮಾರಿ ಜನ.
ಹೀಗಾದರೆ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು.